ಬೆಂಗಳೂರು, ಏ 18, ರಾಜ್ಯದ ಉದ್ದಗಲಕ್ಕೂ ಲಾಕ್ ಡೌನ್ ಉಲ್ಲಂಘನೆಯ ದೂರುಗಳು ಹೆಚ್ಚುತ್ತಿದ್ದು, ಇದೇ 20 ರವರೆಗೂ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. 20ರ ನಂತರ ಕರೋನ ನಿರ್ವಹಣೆ ಕುರಿತಂತೆ ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜರುಗಿದ ಹಿರಿಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ. ಮುಂದಿನ ತಿಂಗಳ 3 ರವರೆಗೆ 144 ನೇ ಕಲಂ ಪ್ರಕಾರ ನಿಷೇಧಾಜ್ಞೆ ಮುಂದುವರೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. 20 ರನಂತರ ಸರ್ಕಾರಿ ಕಚೇರಿಗಳಲ್ಲಿ ಶೇ 33 ರಷ್ಟು ಸಿಬ್ಬಂದಿ ಹಾಗೂ ಐಟಿ ಬಿಟಿ ವಲಯಗಳಲ್ಲೂ ಶೇ. 33 ರಷ್ಟು ಸಿಬ್ಬಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ ನೀಡುವ ತೀರ್ಮಾನಕ್ಕೆ ಬರಲಾಗಿದ್ದು ಅವರೆಲ್ಲರಿಗೂ ಒಪ್ಪಂದದ ಆಧಾರದಲ್ಲಿ ಬಸ್ ಸೇವೆ ಒದಗಿಸಲಾಗುತ್ತದೆ.
ಕಂಟೋನ್ಮೆಂಟ್ ಝೋನ್ ನಲ್ಲಿ ಇನ್ಸಿಡೆಂಟ್ ಕಮಾಂಡರ್ ನೇಮಕ ಮಾಡಿ ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು. ಜೊತೆಗೆ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಯ ತಂಡ ರಚಿಸಲಾಗುವುದು. ಅವರಿಗೆ ಕಂಟೇನ್ಮೆಂಟ್ ಜೋನ್ ಗಳ ಮೇಲ್ಚಿಚಾರಣೆ ವಹಿಸಲಾಗುವುದು.
ಈ ಪ್ರದೇಶದಲ್ಲಿ ಲಾಕ್ ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸಲಾಗುವುದು.ಬಫರ್ ಜೋನ್ ನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುವುದು.ಕಂಟೋನ್ಮೆಂಟ್ ಜೋನ್ ಹೊರತು ಪಡಿಸಿ, ಇತರ ವಲಯಗಳಲ್ಲಿ ದ್ವಿಚಕ್ರವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು, ಹಾಗೂ ನಗರ ಪ್ರದೇಶದಲ್ಲಿ ಎಸ್ಇ ಝಡ್ ಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್ ಷಿಪ್ ಗಳಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು.ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಲು ಅನುಮತಿ ನೀಡಲಾಗುವುದು. ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯಾಗಿ ಪರಿಗಣಿಸಲಾಗುವುದು.ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಕರೋನ ಪ್ರಕರಣಗಳು ಹೆಚ್ಚಾಗಿ ಪತ್ತೆಯಾದ ಪ್ರದೇಶವನ್ನು ಕಂಟೋನ್ ಮೆಂಟ್ ಜೋನ್ ಗುರುತಿಸಿ, ಹಾಗೂ ಇತರ ಪ್ರದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.