ಸ್ಲಂ ನಿವಾಸಿಗಳಿಗೆ ಭೂಮಿಹಕ್ಕು ಖಾತರಿ ನೀಡಲು ಸರ್ಕಾರಕ್ಕೆ ಮನವಿ

ಸ್ಲಂ ನಿವಾಸಿಗಳಿಗೆ ಭೂಮಿಹಕ್ಕು ಖಾತರಿ ನೀಡಲು ಸರ್ಕಾರಕ್ಕೆ ಮನವಿ  Appeal to the government to guarantee land rights for slum dwellers

ಲೋಕದರ್ಶನ ವರದಿ 

ಗದಗ, 27: ರಾಜ್ಯದ ಸ್ಲಂ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಭೂಮಿಹಕ್ಕು ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.  

ಈ ಕುರಿತು ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. 1973ರಲ್ಲಿ ಜಾರಿಗೆ ಬಂದ ಸ್ಲಂ ಕಾಯ್ದೆಯಡಿ ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಸಾವಿರಾರು ಗುಡಿಸಲು ಪ್ರದೇಶಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದರೂ, 53 ವರ್ಷಗಳು ಕಳೆದರೂ ಅಲ್ಲಿನ ನಿವಾಸಿಗಳಿಗೆ ಭೂಮಿಯ ಮಾಲೀಕತ್ವ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ರಾಜ್ಯದಲ್ಲಿ ಸ್ಲಂ ಕಾಯ್ದೆಯಡಿ ಘೋಷಣೆಯಾಗಿರುವ 708 ಖಾಸಗಿ ಮಾಲೀಕತ್ವದ ಸ್ಲಂ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಸೇರಿದಂತೆ ಬಡ ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶಗಳನ್ನು ಸ್ಲಂ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ವಶಪಡಿಸಿಕೊಂಡು, ಕನಿಷ್ಠ ?2,000 ಕೋಟಿ ಅನುದಾನ ಮೀಸಲಿಟ್ಟು ನಿವಾಸಿಗಳಿಗೆ ಭೂಮಿಹಕ್ಕು ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಲಾಗಿದೆ.  

ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಈ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗದೆ, ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿ ಸ್ಲಂ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಹಾಗೂ ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್‌. ಮಾನ್ವಿ, ಜನಾರ್ದನ ಹಳ್ಳಿಬೆಂಚಿ, ಮಹಿಳಾ ಸಂಚಾಲಕಿ ಚಂದ್ರಮ್ಮ, ವಿಭಾಗೀಯ ಸಂಚಾಲಕಿ ಶೋಭಾ ಕಮತರ್, ಖಜಾಂಚಿ ಮಂಜುಬಾಯಿ ಸೇರಿದಂತೆ ಗದಗ, ಬೆಳಗಾವಿ, ಧಾರವಾಡ, ಕೊಪ್ಪಳ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.