ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜಿಲ್ಲಾಧಿಕಾರಿಗೆ ಮನವಿ

ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜಿಲ್ಲಾಧಿಕಾರಿಗೆ ಮನವಿ Appeal to the District Collector for fulfillment of various demands of farmers

ಲೋಕದರ್ಶನ ವರದಿ 

ವಿಜಯಪುರ 27 : ರಸಗೊಬ್ಬರ ದರ ಕಡಿಮೆ ಮಾಡುವುದು ಕೃಷಿ ಚಟುವಟಿಕೆಗಳಿಗೆ ಡಿಸೇಲ್ ಕೊರತೆಯಾಗದಂತೆ ನೊಡಿಕೊಂಡು ರೈತರಿಗೆ ಅಗತ್ಯವಿರುವಷ್ಟು ಡಿಸೇಲ್ ಅನ್ನು ಒದಗಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅಖಂಡ ಕರ್ನಾಟಕ ರೈತ ಸಂಘ ಜಂಟಿಯಾಗಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರ ಮುಖಾಂತರ ಪ್ರಧಾನಮಂತ್ರಿ ಹಾಗೂ ರಾಜ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಘಟಕದ ಸಂಚಾಲಕರಾದ ಸಿದ್ಧನಗೌಡ ಜಲಪೂರ ಮಾತನಾಡಿ, ಕೇಂದ್ರ ಸರ್ಕಾರ ಪದೇ ಪದೇ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಡಿಸೇಲ್ ಮತ್ತು ಪೆಟ್ರೋಲ್ ದರ ಹೆಚ್ಚಿಸುವ ಮೂಲಕ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇರಾನ್ ಮತ್ತು ಇಸ್ರೇಲ್, ಅಮೇರಿಕಾ ಈ ಮೂರು ದೇಶಗಳ ಮಧ್ಯ ನಡೆಯುತ್ತಿರುವ ಯುದ್ಧದ ಪರಿಣಾಮವನ್ನು ಮುಂದಿಟ್ಟುಕೊಂಡು ತೈಲ್ ಬೆಲೆ ದರ ಹೆಚ್ಚಿಗೆ ಮಾಡಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತಿದೆ. ರೈತರ ವಾಹನಗಳಿಗೆ ತೈಲ ಕೊರತೆಯಿಂದ ಒಂದು ಕಡೆ ನಿಲ್ಲುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ತಕ್ಷಣ ಕಡಿಮೆ ಮಾಡಿ ಯಾವುದೇ ಕಾರಣಕ್ಕೆ ರೈತರಿಗೆ ಡಿಸೇಲ್ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.  

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಇತ್ತೀಚಿಗೆ ರಸಗೊಬ್ಬರದ ದರವನ್ನು ಕೂಡಾ ದುಪ್ಪಟ್ಟುಮಾಡಿದ್ದು, ಮತ್ತು ಗೊಬ್ಬರ ಖರೀದಿ ಸಂದರ್ಭದಲ್ಲಿ ರೈತರಿಗೆ ಎಫ್‌ಐಡಿ ಕಡ್ಡಾಯ ಮಾಡಿದ್ದಲ್ಲದೇ ಪ್ರತಿ ಎಕರೆಗೆ ಒಂದೇ ಚೀಲು ಗೊಬ್ಬರ ಕೊಡುವುದಾಗಿ ಸರ್ಕಾರ ನಿರ್ಣಯ ತಗೆದುಕೊಂಡಿರುವುದು ರೈತರಿಗೆ ತೊಂದರೆಯಾಗುತ್ತಿದೆ ರೈತರಿಗೆ ಹೆಚ್ಚಿಗೆ ಗೊಬ್ಬರ ನೀಡಿದರೆ ಕಾಳ ಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂಬ ಕೇಂದ್ರ ಸರ್ಕಾರ ಹೇಳುತ್ತಿದ್ದು, ಇದು ರೈತರಿಗೆ ಅಪಮಾನ ಮಾಡಿದಂತಾಗಿದೆ ಆದ್ದರಿಂದ ಯಾವುದೇ ಮಾನದಂಡವಿಲ್ಲದೇ ರೈತರಿಗೆ ಅಗತ್ಯವಿರುವಷ್ಟು ಗೊಬ್ಬರವನ್ನು ಎಫ್‌ಐಡಿ ಇಲ್ಲದೇ ಒದಗಿಸಬೇಕು ಹಾಗೂ ಯರಿಯಾ ಮತ್ತು ಡಿಎಪಿ ಗೊಬ್ಬರ ಖರೀದಿ ಸಂದರ್ಭದಲ್ಲಿ ಬೇರೆ ಬೇರೆ ವಸ್ತುಗಳನುನ ಖರೀದಿಸಲು ಗೊಬ್ಬರ ಅಂಗಡಿಯ ಮಾಲೀಕರು ಲಿಂಕ್ ಮಾಡುತ್ತಾರೆ. ಆದ್ದರಿಂದ ಲಿಂಕ್ ಮಾಡುವ ಪದ್ದತಿ ನಿಲ್ಲಿಸಬೇಕು ಮತ್ತು ಕೇಂದ್ರ ಸರ್ಕಾರ ನಿಗದಿ ಮಾಡಿದ ಗೊಬ್ಬರಗಳ ದರದ ಫಲಕವನ್ನು ಅಂಗಡಿಯ ಮುಂಭಾಗದಲ್ಲಿ ಪ್ರತಿಯೊಬ್ಬ ರೈತನಿಗೂ ಕಾಣುವಂತೆ ಹಾಕಬೇಕು. ಸರ್ಕಾರ ನಿಗದಿ ಮಾಡಿದ ದರಕ್ಕೆ ರೈತರಿಗೆ ಮಾರಾಟ ಮಾಡಬೇಕು. ಗೊಬ್ಬರ ಖರೀದಿ ಮಾಡಿದ ರೈತರಿಗೆ ಕಡ್ಡಾಯವಾಗಿ ಅಧಿಕೃತ ರಸೀದಿಯನ್ನು ಕೊಡಬೇಕೆಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ವಿಜಯಪುರ ತಾಲೂಕಾಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನವಾರುಗಳಿಗೆ ಕುಡಿಯಲು ನೀರಿಲ್ಲದೇ ತೊಂದರೆಯಾಗುತ್ತಿದ್ದು, ವಿಜಯಪುರ ತಾಲೂಕಿನ ಆಹೇರಿ, ಜಂಬಗಿ, ಹುಣಶ್ಯಾಳ, ಅಂಕಲಗಿ, ಅರನಾಳ, ಇಂಗಳಗಿ ಸೇರಿದಂತೆ ಇನ್ನೀತರ ಗ್ರಾಮಗಳಲ್ಲಿ ನೀರಿನ ಕೊರತೆವುಂಟಾಗಿದೆ. ಈಗಾಗಲೇ ಹೋರಾಟದ ಪರಿಣಾಮವಾಗಿ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗಳಿಗೆ ನೀರು ಹರಿಸಲಾಗಿದೆ. ಆದರೆ ನಮ್ಮ ಭಾಗದಲ್ಲಿ ನೀರು ಹರಿಸಿದಾಗ ಎಂದು ಕಾಲುವೆ ಕೊನೆ ಅಂಚಿನವರೆಗೂ ನೀರು ತಲುಪಿರುವುದಿಲ್ಲ. ಇದರಿಂದ ತೃಪ್ತಿಕರವಾಗಿ ರೈತರಿಗೆ ನೀರು ಸಿಗದಂತಾಗಿದೆ. ಕೆರೆಗಳಿಗೂ ಕೂಡಾ ಸುರಕ್ಷಿತವಾಗಿ ನೀರು ತಲುಪುವುದಿಲ್ಲ ಆದ್ದರಿಂದ ಕೂಡಲೇ ನಾಗಠಾಣ ಗ್ರಾಮದ ಮುಖಾಂತರ ಆ ಭಾಗದ ಎಲ್ಲ ಕೆರೆಗಳಿಗೆ ನೀರನ್ನು ಹರಿಸಬೇಕು. ಹಾಗೂ ವಿಜಯಪುರ ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಿ ಮೂಲ ಕೆರೆ ಅಳತೆ ಗುರುತುಮಾಡಬೇಕೆಂದು ಆಗ್ರಹಿಸಿದರು.  

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಘಟನ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಹೊನಕೇರ​‍್ಪ ತೆಲಗಿ, ಬಬಲೇಶ್ವರ ತಾಲೂಕಾ ಗೌರವ ಅಧ್ಯಕ್ಷ ಸಿದ್ದಪ್ಪ ಕೋಟ್ಯಾಳ, ಬಬಲೇಶ್ವರ ತಾಲೂಕಾ ತಾಲೂಕಾಧ್ಯಕ್ಷ ಗುರಣಗೌಡ ಬಿರಾದಾರ, ಪ್ರಭುಲಿಂಗ ಕಾರಜೋಳ, ಸಂತೋಷ ಚೌರಿ, ಒಗೆಪ್ಪ ಬಿರಾದಾರ, ಸೋಮಯ್ಯ ನಂದಿಕೋಲ, ಅಮೋಗಿ ಉಕ್ಕಲಿ, ಮಲ್ಲಿಕಾರ್ಜುನ ಬಟಗಿ, ಬೋಗೇಶ ಸೊಲಾಪೂರ, ನೀಲಮ್ಮ ಕಟ್ಟಿಮನಿ, ಲಂಕೆಪ್ಪ ತಳವಾರ, ನಬಿರಸೂಲ ಬಿರಾದಾರ, ಗುರ​‍್ಪ ತಳವಾರ, ಅಜೀಜ ಪಾಟೀಲ ಮುಂತಾದ ನೂರಾರು ರೈತರು ಪ್ರತಿಭಟನೆಯಲ್ಲಿ ಇದ್ದರು.