ನಕಲಿ ಜಾತಿ ಪ್ರಮಾಣ ಪತ್ರ ತಡೆಗಟ್ಟಲು ಆಗ್ರಹಿಸಿ ಮನವಿ

ನಕಲಿ ಜಾತಿ ಪ್ರಮಾಣ ಪತ್ರ ತಡೆಗಟ್ಟಲು ಆಗ್ರಹಿಸಿ ಮನವಿ Appeal to prevent fake caste certificates

 ತಾಳಿಕೋಟಿ 26 : ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ-1ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಶಿಷ್ಟ ಪಂಗಡ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ಪಡೆದು ವಂಚನೆ ಮಾಡುತ್ತಿದ್ದು ತಕ್ಷಣ ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಪಟ್ಟಣದ  ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಸಮಿತಿಯ ತಾಲೂಕ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು. 

ಮಹಾಸಭಾದ ಮುಖಂಡ ಅಶೋಕ ದೊರಿಗೋಳ ಮಾತನಾಡಿ ಇತರೆ ಹಿಂದುಳಿದ ಪ್ರವರ್ಗ1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೆರ, ಕೋಲಿ, ಇತರೆ ಜಾತಿಯವರು ನಾಯಕ ತಳವಾರರ ಹೆಸರಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ.ಸರ್ಕಾರದ ಆದೇಶದ ಪ್ರಕಾರ ನಾಯಕ ವಾಲ್ಮೀಕಿ ಜನಾಂಗದಲ್ಲಿ ಬರುವ ನಾಯಕ ತಳವಾರ ಮತ್ತು ನಾಯಕ ಪರಿವಾರ ಜಾತಿಯವರಿಗೆ ಮಾತ್ರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಬೇಕು ಆದರೆ ಹಿಂದುಳಿದ ವರ್ಗದಲ್ಲಿ ಬರುವ ನಾಯಕ ಜಾತಿ ಅಲ್ಲದ ತಳವಾರ ಪರಿವಾರ ಜಾತಿಯವರಿಗೆ ರಾಜ್ಯದಲ್ಲಿ ಲಕ್ಷಾಂತರ ಸುಳ್ಳು ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿರುವುದರಿಂದ ಇವರು ಸರಕಾರದ ಸೌಲಭ್ಯಗಳನ್ನು ಕಬಳಿಸುತ್ತಿರುವ ಬಗ್ಗೆ ಸಮುದಾಯದ ಮುಖಂಡರು ಸರ್ಕಾರದ ಗಮನಕ್ಕೆ ತಂದಿರುವ ಕಾರಣ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಜಾತಿಯವರಿಗೆ ಎಸ್ ಟಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬಾರದು ಎಂದು ಸ್ಪಷ್ಟವಾದ ಆದೇಶ ಹೊರಡಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ನಾಯ್ಕಡ್ ನಾಯಕ ತಳವಾರ ಪರಿವಾರ ಹೆಸರಿನಲ್ಲಿ ಎಸ್ ಟಿ ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿದ್ದು ಜಿಲ್ಲೆಯಲ್ಲಿ ಯಾರೂ ಕೂಡ ನಾಯಕ ಜಾತಿಯ ತಳವಾರ ಜಾತಿಯವರು ಇರುವುದಿಲ್ಲ ಇಲ್ಲಿಯವರೆಗೆ ನೀಡಿರುವ ಎಲ್ಲಾ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ರದ್ದುಪಡಿಸಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದ ಅವರು ಇನ್ನು ಮುಂದೆ ಯಾರಾದರೂ ನಾಯ್ಕಡ ನಾಯಕ ತಳವಾರ ಪರಿವಾರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶದ ಅನ್ವಯ ಅರ್ಜಿದಾರರು ನಾಯಕ, ವಾಲ್ಮೀಕಿ, ಬೇಡ ಮತ್ತು ಬೇಡರ ಜಾತಿಗೆ ಸೇರಿದ ಬಗ್ಗೆ ದಾಖಲಾತಿಗಳನ್ನು ಸಲ್ಲಿಸಿದ್ದರೆ ಮಾತ್ರ ನಾಯ್ಕಡ ನಾಯಕ ತಳವಾರ ಪರಿವಾರ ಜಾತಿ ಪ್ರಮಾಣ ಪತ್ರಗಳನ್ನು ಮಾತ್ರ ನೀಡಬೇಕು ಎಂದರು. 

ಮಹಾಸಭಾದ ಪದಾಧಿಕಾರಿಗಳಾದ ಲಕ್ಷ್ಮಣ ಕೊಡೆಕಲ್, ಸಂಜೀವಪ್ಪ ಬರದೇನಾಳ,ಕಾಶಿನಾಥ ಪಾಟೀಲ, ಪ್ರಕಾಶ್ ಪಾಟೀಲ,ಕುಮಾರ ಅಸ್ಕಿ, ಹಣಮಂತ್ರಾಯ ತಳ್ಳೊಳ್ಳಿ,ಮಲ್ಲಣ್ಣ ಅಸ್ಕಿ,ಹಣಮಂತ್ರಾಯ ನಾಯ್ಕೋಡಿ (ಬೋಳವಾಡ) ಸ.ಕ.ಇ. ಸಹಾಯಕ ನಿರ್ದೇಶಕಿ ಬಿ.ಜಿ.ಮಠ,ಬಿಇಓ ಬಿ.ಎಸ್‌.ಸಾವಳಗಿ,ಪಿಎಸ್‌ಐ ಜ್ಯೋತಿ ಖೋತ, ಶಿರಸ್ತೆದಾರ ಜೆ.ಆರ್‌.ಜೈನಾಪೂರ ಮತ್ತೀತರರು ಉಪಸ್ಥಿತರಿದ್ದರು.