ಗಣೇಶ ಮೂರ್ತಿ ವಿಸರ್ಜನೆ ಬಳಿಕ ಕಾಳಿ ನದಿ ಸ್ವಚ್ಛತೆ ಕಾಪಾಡಲು ಮನವಿ

ಗಣೇಶ ಮೂರ್ತಿ ವಿಸರ್ಜನೆ ಬಳಿಕ ಕಾಳಿ ನದಿ ಸ್ವಚ್ಛತೆ ಕಾಪಾಡಲು ಮನವಿ  Appeal to maintain cleanliness of Kali River after Ganesha idol immersion

ಲೋಕದರ್ಶನ ವರದಿ 

ದಾಂಡೇಲಿ 24: ಭಕ್ತಿಯಿಂದ ಗಣಪನನ್ನು ಬರಮಾಡಿಕೊಂಡಂತೆ ಪರಿಸರವನ್ನೂ ಗೌರವಿಸುವುದು ಭಕ್ತರ ಜವಾಬ್ದಾರಿಯಾಗಿದೆ. ಗಣೇಶ ಮೂರ್ತಿ ವಿಸರ್ಜನೆ ಬಳಿಕ ದಾಂಡೇಲಿಯ ಕಾಳಿ ನದಿ ಸ್ವಚ್ಛವಾಗಿರಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.  

ನಗರದಲ್ಲಿ ಭಕ್ತಿ-ಶ್ರದ್ಧೆಯಿಂದ ನಡೆದ ಗಣೇಶೋತ್ಸವಕ್ಕೆ ಶುಕ್ರವಾರ ತೆರೆ ಬೀಳಲಿದೆ. ಈಗಾಗಲೇ ವಿಸರ್ಜನೆ ಬಳಿಕ ಕಾಳಿ ನದಿಯ ಕೆಲವೆಡೆ ಕಂಡುಬರುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. ನದಿಯಲ್ಲಿ ಸಮರ​‍್ಕ ನೀರಿನ ಹರಿವು ಇಲ್ಲದಿರುವುದು ಹಾಗೂ ಕೆಲವು ಮೂರ್ತಿಗಳು ಸಂಪೂರ್ಣವಾಗಿ ಕರಗದಿರುವುದರಿಂದ ವಿಸರ್ಜಿತ ಗಣೇಶ ಮೂರ್ತಿಗಳು ನದಿಯಲ್ಲಿ ರಾಶಿ ರಾಶಿಯಾಗಿ ಕಾಣಿಸುತ್ತಿವೆ.  

ಮನೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಭಕ್ತರು ಶ್ರದ್ಧೆಯಿಂದ ಕಾಳಿ ನದಿಯಲ್ಲಿ ವಿಸರ್ಜನೆ ಮಾಡುತ್ತಿದ್ದಾರೆ. ಆದರೆ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ದೊಡ್ಡ ಮೂರ್ತಿಗಳು ನದಿಯಲ್ಲಿ ಅಡ್ಡಬಿದ್ದು, ದೀರ್ಘಕಾಲ ಅಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.  

ಗಣೇಶೋತ್ಸವದ ಸಂಭ್ರಮದ ಬಳಿಕ ಕಾಳಿ ನದಿಯ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಭಕ್ತಿಯೊಂದಿಗೆ ಪರಿಸರ ಕಾಳಜಿಯನ್ನೂ ಹೊಂದಬೇಕು. ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳಿಗೆ ಆದ್ಯತೆ ನೀಡಿ, ಸೂಕ್ತ ವಿಸರ್ಜನಾ ವ್ಯವಸ್ಥೆಯನ್ನು ನಗರಾಡಳಿತ ಕಲ್ಪಿಸಬೇಕು. ವಿಸರ್ಜನೆ ಬಳಿಕ ಮೂರ್ತಿಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪರಿಸರ ಪ್ರಿಯರು ಮನವಿ ಮಾಡಿದ್ದಾರೆ.