ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪನೆಗೆ ಮನವಿ

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪನೆಗೆ ಮನವಿ Appeal for establishment of coach depot in Vijayapura

 ಬೆಂಗಳೂರು 01 :  ವಿಜಯಪುರ ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೋಚ್ ಡಿಪೋ ಸ್ಥಾಪನೆ ಹಾಗೂ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಆಗಮನ-ನಿರ್ಗಮನ ದ್ವಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.  ಈ ಸಂಬಂಧ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.  

ವಿಜಯಪುರ ರೈಲು ನಿಲ್ದಾಣದಲ್ಲಿದ್ದ ಗೂಡ್ಸ್‌ ಶೆಡ್ ಸ್ಥಳಾಂತರಗೊಂಡಿರುವುದರಿಂದ ಕೋಚ್ ಡಿಪೋ ನಿರ್ಮಾಣಕ್ಕೆ ಅಗತ್ಯ ಜಾಗ ಲಭ್ಯವಿದೆ. ಇಲ್ಲಿ ಕೋಚ್ ಡಿಪೋ ಸ್ಥಾಪನೆಯಾದರೆ ವಿಜಯಪುರವು ರೈಲ್ವೆಯ ನಿರ್ವಹಣಾ ಕೇಂದ್ರವಾಗಿ ಅಭಿವೃದ್ಧಿಯಾಗುವುದರ ಜೊತೆಗೆ ಉತ್ತರ ಕರ್ನಾಟಕ ಭಾಗದ ರೈಲು ಸೇವೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.  ಐತಿಹಾಸಿಕ ನಗರವಾದ ವಿಜಯಪುರಕ್ಕೆ ವರ್ಷಪೂರ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯ, ಹಬ್ಬ-ಹರಿದಿನ ಹಾಗೂ ರಜೆ ಸಂದರ್ಭಗಳಲ್ಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಹೆಚ್ಚುವರಿ ದ್ವಾರ ನಿರ್ಮಾಣ ಅಗತ್ಯವಾಗಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.  

ಇತ್ತೀಚೆಗೆ ನಡೆದ ರೈಲ್ವೆ ಇಲಾಖೆಯ ಸಭೆಯಲ್ಲಿ ಈ ವಿಷಯವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿದ್ದು, ಅವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.  ಈ ಬೇಡಿಕೆಗಳು ಈಡೇರಿದರೆ, ಶೀಘ್ರದಲ್ಲೇ ಆರಂಭವಾಗಲಿರುವ ಬೆಂಗಳೂರು ಹಿ ವಿಜಯಪುರ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯ ನಿರ್ವಹಣೆ ಇನ್ನಷ್ಟು ಸುಗಮವಾಗಲಿದ್ದು, ಉತ್ತರ ಕರ್ನಾಟಕದ ರೈಲು ಮೂಲಸೌಕರ್ಯಕ್ಕೂ ಹೊಸ ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.