ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲು ಆಗ್ರಹಿಸಿ ಮನವಿ

ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲು ಆಗ್ರಹಿಸಿ ಮನವಿ Appeal demanding reconstruction of roads

ವಿಜಯನಗರ 24: ನಗರದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಶ್ಲಾಘನೀಯ ಆದರೆ ಇದ್ದುದರಲ್ಲಿಯೇ ಸುಸ್ತಿತಿಯಲ್ಲಿರುವ ರಸ್ತೆಗಳನ್ನು ಮತ್ತಷ್ಟು ಮರು ನಿರ್ಮಾಣ ಮಾಡದೇ ಪೂರ್ತಿ ಕಳಪೆಯಾಗಿರುವ ತಗ್ಗುಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲು ನಾಗರೀಕ ವೇದಿಕೆ ಹಾಗೂ ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ಸಂಯುಕ್ತ ಆಶ್ರಯದಲ್ಲಿ ಸಂಘಟನೆಯ ಪದಾಧಿಕಾರಿಗಳು ಇಂದು ಕ್ಷೇತ್ರದ ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ರವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಅಧ್ಯಕ್ಷರಾದ ಯು.ಆಂಜನೇಯಲು ಮಾತನಾಡಿ ನಗರದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಶ್ಲಾಘನೀಯ ಆದರೆ ಇದ್ದುದರಲ್ಲಿಯೇ ಸುಸ್ತಿತಿಯಲ್ಲಿರುವ ರಸ್ತೆಗಳನ್ನು ಮತ್ತಷ್ಟು ಮರು ನಿರ್ಮಾಣ ಮಾಡದೇ ಪೂರ್ತಿ ಕಳಪೆಯಾಗಿರುವ ತಗ್ಗುಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಬೇಕು. ವಿಶೇಷವಾಗಿ ಕೆಲವು ಮುಖ್ಯರಸ್ತೆಗಳು ಹಾಗೂ ವಾರ್ಡ್‌ಗಳಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ಅಸುರಕ್ಷಿತವಾಗಿದ್ದು, ಅಂತಹ ಕಡೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕಳಪೆ ರಸ್ತೆ ನಿರ್ಮಾಣಕ್ಕೆ ಕಾರಣರಾಗುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿಟ್ಟು ಅವರ ಲೈಸೆನ್ಸ್‌ ರದ್ದುಗೊಳಿಸಿ ಕಾಮಗಾರಿಯ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  

ನಂತರ ವಿಜಯನಗರ ನಾಗರೀಕ ವೇದಿಕೆಯ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ರಸ್ತೆಗಳು ನಗರಕ್ಕೆ ಹೃದಯವಿದ್ದಂತೆ. ನಗರ ಪ್ರದೇಶದ ಸುಸ್ತಿರ ಬೆಳವಣಿಗೆಗೆ ಗುಣಮಟ್ಟದ ರಸ್ತೆಗಳು ಅಗತ್ಯ. ಸುಸಜ್ಜಿತ ರಸ್ತೆಗಳಿಂದ ಸಂಚಾರ ವ್ಯವಸ್ಥೆ ಉತ್ತಮವಾಗಿ ವ್ಯಾಪಾರ, ಉದ್ಯೋಗ, ಶಿಕ್ಷಣ ಕೇಂದ್ರಗಳಿಗೆ ಸಕಾಲದಲ್ಲಿ ತಲುಪಬಹುದು. ಸಾಗಾಣಿಕೆ ವೆಚ್ಚ ಕಡಿಮೆಯಾಗಿ ಹೊಸ ಉದ್ಯಮಗಳ ಸ್ಥಾಪನೆ, ಬಂಡವಾಳ ಹೂಡಿಕೆಯ ಉತ್ತೇಜನ ದೊರೆಯುತ್ತದೆ.   

ಹೊಸಪೇಟೆ ಪ್ರವಾಸಿ ತಾಣಗಳಿಗೆ ಹತ್ತಿರದಲ್ಲಿದ್ದು, ಹಂಪಿ, ಅಂಜನಾದ್ರಿ, ವೀಕ್ಷಿಸಲು ಅಸಂಖ್ಯಾತರ ಪ್ರವಾಸಿಗರು ಆಗಮಿಸುತ್ತಾರೆ. ದೇಶವಿದೇಶಗಳಿಂದ ಬರುವ ಪ್ರವಾಸಿಗರು ಸುಸಜ್ಜಿತ ರಸ್ತೆಗಳು ಹಾಗೂ ಉತ್ತಮ ನಾಗರೀಕ ಮೂಲಸೌಲಭ್ಯಗಳಿಂದ ಪ್ರಭಾವಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿದರೆ ಪ್ರವಾಸೋದ್ಯಮ ಆರ್ಥಿಕ ಬೆಳವಣಿಗೆ ಆಗುತ್ತದೆ. ರಸ್ತೆ ಮತ್ತಿತರ ಅಭಿವೃಧ್ದಿ ಯೋಜನೆಗಳ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ಸಾರ್ವಜನಿಕರಿಗೆ ಉತ್ತರದಾಯತ್ವರಾಗುವಂತೆ ಕ್ರಮಕೈಗೊಳ್ಳಬೇಕು ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ಅನುದಾನದ ಸದ್ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಎ.ಜಗನ್ನಾಥ, ಎ.ಎಂ.ಬಸವರಾಜ, ಜಿ.ದೇವರೆಡ್ಡಿ, ಜಿ.ಉಮಾಮಹೇಶ್ವರ್, ಪಿ.ನಾಗರಾಜ, ಎ.ಭೀಮಪ್ಪ, ಟಿ.ನಾಗೇಂದ್ರ​‍್ಪ, ಬಿ.ವಿರುಪಾಕ್ಷಪ್ಪ, ಖಾಸಿನಾಥ ಕುಲಕರ್ಣಿ, ಎನ್‌.ವಾಸುದೇವಪ್ಪ, ತಿಪ್ಪೇಸ್ವಾಮಿ.ಹೆಚ್, ಎಂ.ನಾಗಲಿಂಗಪ್ಪ, ಶೇಕ್‌ಮೆಹಬೂಬ್‌ಬಾಷಾ, ಇ.ಎನ್‌.ರಂಗಣ್ಣ, ಜಿ.ರಾಘವೇಂದ್ರ, ಎಂ.ಶಂಕ್ರ​‍್ಪ, ಕೆ.ವಿ.ರಾಮಾಲಿ, ಯರಿ​‍್ರಸ್ವಾಮಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.