ಹಳೇರಿತ್ತಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಹಳೇರಿತ್ತಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ Annual Friendship Conference of the Higher Primary School in Halerithi Village

ಹಾವೇರಿ 16 : ಶಾಲೆಗಳು ದೇವಾಲಯವಿದ್ದಂತೆ. ದೇವಾಲಯದ ಒಳಗಡೆ ನಾವು ಚಪ್ಪಲಿಗಳನ್ನು ಬಿಟ್ಟು ಹೇಗೆ ಹೊಗುತ್ತೇವೆಯೋ, ಹಾಗೆಯೇ ಶಾಲೆ ಒಳಗಡೆ ಜನರು ರಾಜಕೀಯ ಮತ್ತು ಜಾತಿಯನ್ನು ಬಿಟ್ಟು ಬರಬೇಕು. ಅಂದಾಗ ಮಾತ್ರ ಶಾಲೆಯಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಎಂ.ಎಫ್‌. ಭಗವಂತಗೌಡ್ರ ಅವರು ಹೇಳಿದರು. 

ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಮಕ್ಕಳಲ್ಲಿ ನೆನಪಿನ ಶಕ್ತಿ, ಏಕಾಗ್ರತೆಯ ಮಟ್ಟ ಕಡಿಮೆ ಆಗುತ್ತಿದೆ. ಅತಿಯಾದ ಮೊಬೈಲ್ ನೋಡುವುದರಿಂದ, ಟಿವಿ ನೋಡುವುದರಿಂದ  ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ಮಕ್ಕಳಿಗೆ ಪ್ರತಿದಿನ 10 ರಿಂದ 15 ನಿಮಿಷ ಧ್ಯಾನ ಮಾಡಿಸಬೇಕು. ಯೋಗಾಸನ ಮಾಡಿಸಬೇಕು. ತರಕಾರಿಯನ್ನು ಹೆಚ್ಚು ಉಪಯೋಗಿಸಿ ಬಿಸಿ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಬೇಕು ಎಂದು ತಾಯಂದಿರಿಗೆ ಕಿವಿಮಾತು ಹೇಳಿದರು. 

ಶಾಲೆಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುವ ಸಲುವಾಗಿ ಸರಕಾರ ಮೊಟ್ಟೆ, ಬಿಸಿ ಊಟ, ಮೊಳಿಕೆ ಬಂದ ಕಾಳುಗಳನ್ನು ವಿತರಿಸುತ್ತಿದೆ. ಈ ಶಾಲೆಗೆ ಒಳ್ಳೆಯ ಶಿಕ್ಷಕರನ್ನು ಪಡೆದುಕೊಂಡಿದ್ದೀರಿ ಅಂದರೆ ಹಳೇರಿತ್ತಿ ಜನರು ಶ್ರೇಷ್ಠರು ಎಂದರು. 

ಶಿಕ್ಷಣ ಸಂಯೋಜಕರಾದ ಓ.ಎಂ.ಪ್ರಕಾಶ ಯತ್ತಿನಹಳ್ಳಿ ಉದ್ಘಾಟಕರಾಗಿ ಮಾತನಾಡಿ ಈ ಶಾಲೆಯಲ್ಲಿ 240 ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ ಅಂದರೆ ಇಲ್ಲಿಯ ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು. ಗ್ರಾಮದ ಜನರಿಗೆ ಮತ್ತು ಶಿಕ್ಷಕ-ಶಿಕ್ಷಕಿಯರಿಗೆ ನಾನು ಅಭಾರಿಯಾಗಿರುತ್ತೇನೆ. ಈ ಗ್ರಾಮದಲ್ಲಿ ದಾನಿಗಳು ಹೆಚ್ಚಾಗಿ ಇರುವುದರಿಂದ ಈ ಶಾಲೆಯಲ್ಲಿ ಎಸ್‌ಡಿಎಂಸಿ ಅವರು ಮತ್ತು ಊರಿನವರು  ಸೇರಿಕೊಂಡು ಮುಂದಿನ ವರ್ಷ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ನಂತರ ಸರಕಾರವೇ ಇಂಗ್ಲಿಷ್ ಮೀಡಿಯಂ ಶಾಲೆಯನ್ನಾಗಿ ಮಾಡಬಹುದು. ಹಾಗೆಯೇ ಮುಂದೆ ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಪರಿವರ್ತನೆ ಮಾಡುತ್ತದೆ ಎಂದು ಊರಿನ ಜನರಿಗೆ ಕಿವಿಮಾತು ಹೇಳಿದರು.  

ಸನ್ಮಾನ: ನಮ್ಮ ಶಾಲೆಯ ಪ್ರತಿಬಾನ್ವಿತ ವಿದ್ಯಾರ್ಥಿಗಳಾದ ಸುದೀಪ ಕಮ್ಮಾರ, ಜಯಲಕ್ಷ್ಮಿ ತಿಮ್ಮಣ್ಣನವರ, ಶಿವನಗೌಡ ಪಾಟೀಲ, ರೇಖಾ ಪಾಟೀಲ, ನಾಗಮ್ಮ ವಗ್ಗಣ್ಣನವರ, ಶಿವರಾಜ ಕಿಳ್ಳಿಖ್ಯಾತರ ಹಾಗೂ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟ ದಾನಿಗಳಿಗೆ, ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿ ವರ್ಗದವರಿಗೆ, ಅಡುಗೆ ತಯಾರಕರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರಿಗೆ ಬೆಳ್ಳಿ ಉಂಗುರವನ್ನು ಕೊಡುವ ಮುಖಾಂತರ ಸನ್ಮಾನಿಸಿ ಗೌರವಿಸಲಾಯಿತು. ಬಹುಮಾನ ವಿತರಣೆ: ಪ್ರಾಥಮಿಕ ಶಾಲೆಯಲ್ಲಿ ಘಟಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಈ ವೇಳೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಮಕ್ಕಳು ಹಳ್ಳಿ ಸೊಬಗಿನ ಸುಗ್ಗಿ ಹಾಡುಗಳು, ಸ್ವಾತಂತ್ರ್ಯ ಪೂರ್ವದಲ್ಲಿನ ಹೋರಾಟಗಾರ ಜೀವನದ ರೂಪುರೇಶೆಗಳು ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ವೀರ ಯೋಧರು ಯಾವ ರೀತಿ ಹೋರಾಟ ಮಾಡಿದರು ಹೀಗೆ ಹಲವಾರು ರೀತಿಯ ನೃತ್ಯಗಳನ್ನು ಪ್ರದರ್ಶನ ಮಾಡಿ ಶಾಲಾ ಮಕ್ಕಳು ನೋಡುಗರ ಗಮನ ಸೇಳೆದರು. 

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಚಿಕ್ಕನಗೌಡ ಪಾಟೀಲ, ಮುಖಂಡರಾದ ಶಿವಪ್ಪ ತಿಮ್ಮಣ್ಣನವರ, ಶಿವಪ್ಪ ಗೋಪಾಳಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಂ.ಅಗಡಿ, ಕಾರ್ಯಕ್ರಮದ ಸಾನಿಧ್ಯವಹಿಸಿದ ಪಕ್ಕಿರಯ್ಯ ಹಿರೇಮಠ, ಸಿ.ಪಿ.ಭಜಂತ್ರಿ, ಶಂಭು ದೇಶಳ್ಳಿ, ಶಾಲೆಯ ಶಿಕ್ಷಕರು,ಗ್ರಾಪಂ ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಮುಖಂಡರು ಸೇರಿದಂತೆ ಅನೇಕದ್ದರು. ಲೋಹಿತಕುಮಾರ ಸಂಗಡಿಗರು ಪ್ರಾರ್ಥಿಸಿದರು. ಎಸ್‌.ಬಿ.ಮಠದ ಸ್ವಾಗತಿಸಿ, ವಂದಿಸಿದರು. ಶಿಕ್ಷಕರಾದ ಎಫ್‌.ಜಿ.ಕೊಕ್ಕರಗುಂದಿ ಅವರು ನಿರೂಪಿಸಿದರು.