ಆದರ್ಶ ಶಿಕ್ಷಕನಿಗೆ ಅಭೂತಪೂರ್ವ ವಿದಾಯ ! ಅಭಿಮಾನದ ಆಗರ, ಸನ್ಮಾನದ ಸುರಿಮಳೆ !
An unprecedented farewell to an ideal teacher
ಮುಂದಿನ ಜನ್ಮದಲ್ಲಿ ಶಿಕ್ಷಕನಾಗಿಯೇ ಹುಟ್ಟುವಾಸೆ: ಶಿಷ್ಯಕೋಟಿಗೆ ಕೋಟಿ ನಮನ ಹೇಳಿದ ಶಿಕ್ಷಕ
ಮಹಾಲಿಂಗಪುರ 09: ಗುರುವೇನು ಮಹಾ? ಎನ್ನುವ ಕಾಲದಲ್ಲಿ ಗುರುವಿಗೇ ಗರ್ರ ಎನ್ನುವ ಕಲಿಗಾಲದಲ್ಲಿ ಗುರು ಕುಲವೇ ಗರ್ವ ಪಡುವಂತೆ ವಿದ್ಯಾರ್ಥಿ ಕುಲವೇ ವಿಸ್ಮಯಗೊಳ್ಳುವಂತೆ ನಿವೃತ್ತ ಶಿಕ್ಷಕನಿಗೆ ಅದ್ದೂರಿ ಮತ್ತು ಅಭೂತಪೂರ್ವ ಅಭಿನಂದನಾ ಸಮಾರಂಭವೊಂದು ಗಮನ ಸೆಳೆಯಿತು.
ಸಮೀಪದ ಕುಳಲಿ ಗ್ರಾಮದ ನಿವಾಸಿ, ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 33 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿ.ಪಿ. ಮಠ ಅವರಿಗೆ ಗ್ರಾಮದ ಶ್ರೀ ಸಿದ್ದೇಶ್ವರ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಗುರು-ಶಿಷ್ಯ ಪರಂಪರೆಗೆ ಹೊಸ ಭಾಷ್ಯ ಬರೆದಂತಾಯಿತು. 4 ಸಾವಿರ ಜನರ ಮಧ್ಯೆ ಗೌರವಿಸಿದ್ದನ್ನು ಕಂಡ ಗುರುಗಳು ಮುಂದಿನ ಜನ್ಮದಲ್ಲಿ ಶಿಕ್ಷಕನಾಗಿಯೇ ಹುಟ್ಟುವಾಸೆ ಎಂದು ಶಿಷ್ಯಕೋಟಿಗೆ ಕೋಟಿ ನಮನ ಹೇಳಿದರು.
ರಥದಲ್ಲಿ ಮೆರವಣಿಗೆ:
ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 33 ವರ್ಷಗಳಲ್ಲಿ ಕಲಿತ 33 ಬ್ಯಾಚ್‌ನ ಸಾವಿರಾರು ವಿದ್ಯಾರ್ಥಿಗಳು ಅದ್ದೂರಿ ಬೀಳ್ಕೊಡುವ ಸಮಾರಂಭ ಹಮ್ಮಿಕೊಂಡು 4 ಸಾವಿರ ಜನರಿಗೆ ಉಣಬಡಿಸಿದರು. ಸಿದ್ದೇಶ್ವರ ಪ್ರೌಢಶಾಲೆಯಿಂದ ಸಮುದಾಯ ಭವನದವರೆಗೆ 1 ಕಿಮೀ ದಾರಿಯಲ್ಲಿ ನೀರು ಹುಯ್ದು, ರಂಗೋಲಿ ಹಾಕಿ, ದಾರಿಗೆ ಹೂ ಹಾಸಲಾಯಿತು. ಸಾವಿರಾರು ಶಿಷ್ಯಂದಿರು ಸಕಲ ವಾದ್ಯ ಮೇಳದೊಂದಿಗೆ ಸಾರೋಟ್‌ನಲ್ಲಿ ಶಿಕ್ಷಕನನ್ನು ದಂಪತಿ ಸಮೇತ ಮೆರವಣಿಗೆ ಮಾಡಿ ಕರೆತಂದರು.
ಅಭಿಮಾನದ ಹೂಮಳೆ ! ಸನ್ಮಾನದ ಸುರಿಮಳೆ :
ಭವ್ಯ ವೇದಿಕೆಯಲ್ಲಿ ಆದರ್ಶ ಶಿಕ್ಷಕ ವಿ.ಪಿ.ಮಠ ದಂಪತಿಗೆ ಪಾದಪೂಜೆ ಮಾಡಿ ಪುಷ್ಪವೃಷ್ಠಿ ಮಾಡಿ ಗೌರವಿಸಲಾಯಿತು. ಗ್ರಾಮದ ಹಿರಿಯರು, ವಿವಿಧ ಸಂಘ ಸಂಸ್ಥೆಗಳು, ಇಲಾಖೆ ಅಧಿಕಾರಿಗಳು, ಶಾಲೆಯ ಮೊದಲ ಬ್ಯಾಚ್‌ನಿಂದ ಇಲ್ಲಿಯವರೆಗಿನ ಎಲ್ಲ 33 ಬ್ಯಾಚ್‌ನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ವೈವಿಧ್ಯಮಯ ಉಡುಗೊರೆಗಳೊಂದಿಗೆ ಸನ್ಮಾನದ ಸುರಿಮಳೆಗೈದರು. ಒಟ್ಟಾರೆ ಅಂದಾಜು 2.50 ಲಕ್ಷ ನಗದು ಕಾಣಿಕೆ, ರೆಫ್ರಿಜರಿಟರ್, ವಾಷಿಂಗ್ ಮಷಿನ್, ಬೆಳ್ಳಿ ಮೂರ್ತಿ, ದೇವರ ಮತ್ತು ಆದರ್ಶ ವ್ಯಕ್ತಿಗಳ ಭಾವಚಿತ್ರ, ವಿದ್ಯಾರ್ಥಿ ಚಿತ್ರಕಲಾವಿದರಿಂದ ಶಿಕ್ಷಕನ ಪೇಂಟಿಂಗ್ ಸೇರಿದಂತೆ ಕಾಣಿಕೆಗಳ ಕಣಜವನ್ನೇ ವಿದ್ಯಾರ್ಥಿಗಳು ನೀಡಿದರು.
ಶಾಲೆಯ ಬೀದಿಗೆ ಶಿಕ್ಷಕನ ಹೆಸರು:
ವಿಯಕುಮಾರ ಮಠ ಗುರುಗಳು ನಿತ್ಯ ಸಂಚರಿಸುವ ಶ್ರೀ ಸಿದ್ದೇಶ್ವರ ಪ್ರೌಢಶಾಲೆಗೆ ಶಾಲೆಯ ರಸ್ತೆಗೆ ವಿ.ಪಿ.ಮಠ ರಸ್ತೆ ಎಂದು ನಾಮಕರಣ ಮಾಡಿದ್ದು ವಿಶೇಷವಾಗಿತ್ತು. ಸಮರಾ್ಣ ಮನೋಭಾವದಿಂದ ತಮ್ಮ ಅರ್ಧ ಆಯಸ್ಸನ್ನೇ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಶಿಕ್ಷಕನಿಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಿ.ಪಿ.ಮಠ ಅವರನ್ನು ಶಾಲೆಯ ಆಡಳಿತ ಮಂಡಳಿಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಸ್ಥಳದಲ್ಲೇ ಆದೇಶಪತ್ರ ನೀಡಿ ಮತ್ತೆ ಬರಮಾಡಿಕೊಂಡರು. ಪರದೆ ಮೇಲೆ ವಿ.ಪಿ.ಮಠ ಅವರ ಜೀವನ ಚರಿತ್ರೆಯ ವಿಟಿ ಪ್ರದರ್ಶಿಸಿದ್ದು ಅವರ ಆದರ್ಶ ಜೀವನಕ್ಕೆ ಬೆಳಕು ಚೆಲ್ಲಿದಂತಾಯಿತು.
ಶ್ರೀ ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ, ಚಿಮ್ಮಡ ವಿರಕ್ತ ಮಠದ ಶ್ರೀ ಪ್ರಭು ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದೇಶದ ಇಂಜನಿಯರ್, ಮಹಾರಾಷ್ಟ್ರದ ಡಿಐಜಿ, ನಾಡಿನ ಜಡ್ಜ್, ಪಿಎಸ್‌ಐ, ಗಣ್ಯ ವರ್ತಕ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವ ಸಾವಿರಾರು ಹಳೇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಡೀ ಊರಿಗೇ ಭರ್ಜರಿ ಊಟ ಉಣಬಡಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 