ಬಂಡಿಪುರ, ಏ 15,ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್‌ಡೌನ್ ಜಾರಿಯಾಗಿರುವ ಹಿನ್ನಲೆಯಲ್ಲಿ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲೊಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ವನ್ಯ ಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಬಂಡೀಪುರ ಸಫಾರಿ ಕೇಂದ್ರ ಕೂಡ ಸ್ಥಬ್ದಗೊಂಡಿದೆ. ಸಾರ್ವಜನಿಕರು, ವಾಹನಗಳ ಸಂಚಾರವಿಲ್ಲದ ಕಾರಣ ವನ್ಯ ಪ್ರಾಣಿಗಳಿಗೆ ಈಗ ಸಂಪೂರ್ಣ ಸ್ವತಂತ್ರ್ಯ ಲಭಿಸಿದೆ. ಬಂಡೀಪುರದ ಮುಖಾಂತರ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೬೭ ಹಾಗೂ ಗುಂಡ್ಲುಪೇಟೆಯಿಂದ ಬಂಡೀಪುರ ಮಾರ್ಗವಾಗಿ ಕೇರಳದ ಸುಲ್ತಾನ್‌ಬತ್ತೇರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೨೧೨ರಲ್ಲಿ ಅಗತ್ಯ ಸೇವೆಗಳನ್ನು ಕೊಂಡೊಯ್ಯುವ ವಾಹನಗಳನ್ನು ಹೊರತುಪಡಿಸಿ, ಸಂಪೂರ್ಣವಾಗಿ ನಿರ್ಬಂಧ ಹೇರಿರುವುದರಿಂದ ಈ ರಸ್ತೆಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಈಗ ಜಿಂಕೆಗಳು, ಆನೆಗಳು, ಕಾಡೆಮ್ಮೆ, ಕಾಡುಹಂದಿ, ನವಿಲು, ಕಡವೆ, ಸ್ವಚ್ಚಂದವಾಗಿ ವಿಹರಿಸುತ್ತಿವೆ.
ಜೊತೆಗೆ ಅಮೇರಿಕಾದ ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಈ ವಿಚಾರ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಜೊತೆಗೆ ಕಾಸರಗೊಡು ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಐಸೋಲೇಷನ್ ವಾರ್ಡ್‌ನಲ್ಲಿ ೫ ಬೆಕ್ಕುಗಳು ಮೃತಪಟ್ಟಿರುವುದರಿಂದ ಕೋವಿಡ್ ೧೯ ವನ್ಯ ಪ್ರಾಣಿಗಳಿಗೆ ಹಬ್ಬದಂತೆ ತಡೆಗಟ್ಟಲು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹಾದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಕಟ್ಟೆಚ್ಚರ ವಹಿಸಿದ್ದು, ಪ್ರತಿದಿನ ಸಹಜ ಹಾಗೂ ಅಸಹಜ ಸಾವೀಗೀಡಾದ ಪ್ರಾಣಿಗಳ ಮಾಹಿತಿಯನ್ನು ರಾಜ್ಯ ಅರಣ್ಯ ಇಲಾಖೆ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಿದೆ ಎಂದು ಉನ್ನ ಮೂಲಗಳು ತಿಳಿಸಿವೆ.