ನವದೆಹಲಿ, ಜೂನ್ 14, ರಾಷ್ಟ್ರ ರಾಜಧಾನಿಯಲ್ಲಿನ ಕೊರೊನಾ ಸೋಂಕಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಾತುಕತೆ ನಡೆಸಲಿದ್ದಾರೆ.ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಗಳೊಂದಿಗೆ ಕೂಡ ಭಾನುವಾರ ಸಂಜೆ ಸಭೆ ನಡೆಸಲಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ||ಹರ್ಷವರ್ಧನ್, ಏಮ್ಸ್ ನಿರ್ದೇಶಕ ಡಾ||ರಣ್ ದೀಪ್ ಗುಲೇರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಎರಡೂ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರು ಈ ಸಭೆ ಕರೆದಿದ್ದು ಈ ಸಭೆ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗಿದೆ.ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 36,00,824 ಕ್ಕೆ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 2,137 ಹೊಸ ಪ್ರಕರಣಗಳು ವರದಿಯಾಗಿವೆ. ಮೃತರ ಸಂಖ್ಯೆ 1,214 ರಷ್ಟಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ನಿರ್ವಹಣೆಯ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಜನರಲ್ ತಜ್ಞರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲಹೆ ಸೂಚನೆ ನೀಡಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕರು, ದೆಹಲಿ ಏಮ್ಸ್ ನಿರ್ದೇಶಕರು ಮತ್ತು ಎನ್ ಸಿ ಡಿ ಸಿ ನಿರ್ದೇಶಕರು ಈ ಸಮಿತಿಯಲ್ಲಿದ್ದಾರೆ.