ದೆಹಲಿಯಲ್ಲಿ ಮುಂದುವರೆದ ಅಮಿತ್ ಷಾ ಸಭೆ: ಇಂದು ಸರ್ವ ಪಕ್ಷ ಮುಖಂಡರೊಂದಿಗೆ ಸಮಾಲೋಚನೆ

ನವದೆಹಲಿ, ಜೂ 15, ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಇಂದು ಕೊವಿಡ್-೧೯ ಪರಿಸ್ಥಿತಿ ಕುರಿತು ಚರ್ಚಿಸಲು ಇಂದು ಸರ್ವಪಕ್ಷ ಮುಖಂಡರ ಸಭೆ ಕರೆದಿದ್ದಾರೆ.ಸಭೆಗೆ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಬಿಎಸ್ ಪಿ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ.ದೆಹಲಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ 40 ಸಾವಿರ ಗಡಿ ಸನಿಹಕ್ಕೆ ಬಂದು ನಿಂತಿದೆ. ಸೋಂಕಿಗೆ ಈವಗೆಗೆ 1200 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.ಆಡಳಿತ ಕೇಂದ್ರ ಬಿಂದುವಾಗಿರುವ ದೆಹಲಿಯಲ್ಲಿ ಹಲವಾರು ಮುಖಂಡರು, ಕೇಂದ್ರ ಸಚಿವರು. ವಿವಿಧ ದೇಶಗಳ ರಾಯಭಾರಿ ಕಚೇರಿಗಳು, ಪ್ರಮುಖ ಕಚೇರಿಗಳಿದ್ದು, ಇಲ್ಲಿ ಸೋಂಕು ನಿಯಂತ್ರಣ ಸವಾಲಾಗದೆ.

ಹೀಗಾಗಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಸರ್ವ ಪಕ್ಷ ಮುಖಂಡರ ಸಭೆ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ ಅಮಿತ್ ಶಾ, ಸೋಂಕಿತರ ಚಿಕಿತ್ಸೆಗಾಗಿ ದೆಹಲಿಗೆ ೫೦೦ ರೈಲ್ವೆ ಬೋಗಿಗಳನ್ನು ನೀಡುವುದಾಗಿ ಹೇಳಿದ್ದಾರೆ.ಕೊವಿಡ್ ಸೋಂಕು ಇಡೀ ದೇಶದಲ್ಲೇ ಹೆಚ್ಚಾಗುತ್ತಿರುವ ಸಮಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪರಸ್ಪರ ಸಮನ್ವಯದಿಂದ ಕೆಲಸ ಮಾಡುವಂತೆ ದೆಹಲಿ ಸರ್ಕಾರ ಮತ್ತು ಅಲ್ಲಿನ ಮೂರು ನಗರಪಾಲಿಕೆಗಳಿಗೆ ಅಮಿತ್ ಶಾ ಸೂಚಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟವನ್ನು ಪರಸ್ಪರ ಸಮನ್ವಯದಿಂದ ಗೆಲ್ಲುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.