ಕಡಿಮೆ ಮಳೆಯ ಹಿನ್ನೆಲೆ: ಸಿಹಿಕಬ್ಬು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಸಲಹೆ

ಕಡಿಮೆ ಮಳೆಯ ಹಿನ್ನೆಲೆ: ಸಿಹಿಕಬ್ಬು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಸಲಹೆ  Amidst low rainfall: Horticulture Department's advice to sugarcane growers

ಲೋಕದರ್ಶನ ವರದಿ 

ಖಾನಾಪುರ 18: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಿಹಿಕಬ್ಬು ಬೆಳೆಗಾರರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.  ಖಾನಾಪುರ ತಾಲೂಕಿನ ಜಾಂಬೋಟಿ ಹೋಬಳಿಯ ವಿವಿಧ ಗ್ರಾಮಗಳ ಸಿಹಿಕಬ್ಬು ತಾಕುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿತು. ತೋಟಗಾರಿಕೆ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣಕುಮಾರ ಉಪಳೆ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಅಣ್ಣಾಸಾಬ ಕಾಂಬಳೆ ಅವರು ಬೆಳೆ ಸ್ಥಿತಿಗತಿ ಪರೀಶೀಲಿಸಿದರು.  

ಸಿಹಿಕಬ್ಬು ಬೆಳೆಗೆ ಅಗತ್ಯವಾದ ತೇವಾಂಶ ನಿರ್ವಹಣೆ, ಸಾವಯವ ಹೊದಿಕೆ ಬಳಕೆ, ಗಿಡಗಳ ಸಾಂದ್ರತೆ ಕಡಿಮೆ ಮಾಡುವುದು, ಮಣ್ಣಿನ ತೇವಾಂಶ ಕಾಪಾಡಲು ರಕ್ಷಣಾ ಕಾಲುವೆ ನಿರ್ಮಾಣ ಹಾಗೂ ಲಭ್ಯ ನೀರನ್ನು ಸಮರ​‍್ಕವಾಗಿ ಬಳಸಿಕೊಳ್ಳುವಂತೆ ರೈತರಿಗೆ ಸೂಚಿಸಿದರು. ನೀರಾವರಿ ಸೌಲಭ್ಯ ಇರುವ ರೈತರು ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.  

ಸಿಹಿಕಬ್ಬು ಬಿತ್ತನೆಯಾಗದ ಜಮೀನುಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾದ ಬಳಿಕ ನಾಟಿಗೆ ಸೂಕ್ತ ಅಂತರ ಕಾಯ್ದುಕೊಳ್ಳಬೇಕು. ಸಮಪಾತಳಿ ಬದು ನಿರ್ಮಾಣ, ರಕ್ಷಣಾ ಕಾಲುವೆ ನಿರ್ಮಾಣ, ನಾಟಿ ಬಳಿಕ ಸಾವಯವ ಹೊದಿಕೆ ಹಾಕುವುದು ಹಾಗೂ ಪ್ರತಿ ಎಕರೆಗೆ 4 ಕೆ.ಜಿ. ಮೈಕೋರೈಜಾ ಗೊಬ್ಬರವನ್ನು ಸಾವಯವ ಗೊಬ್ಬರದೊಂದಿಗೆ ಬಳಕೆ ಮಾಡುವಂತೆ ತಿಳಿಸಲಾಯಿತು.  ಸಸ್ಯ ಪ್ರಚೋದಕ ಟ್ರೈಕಾಂಟಿನಾಲ್ ಅನ್ನು ಪ್ರತಿ ಲೀಟರ್ ನೀರಿಗೆ 0.5 ರಿಂದ 1 ಗ್ರಾಂ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಬೆಳೆ ನಿರ್ವಹಣಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಧಿಕಾರಿಗಳು ಹೇಳಿದರು. ಕಡಿಮೆ ನೀರಿನ ಅವಶ್ಯಕತೆ ಇರುವ ಗೋವಿನ ಜೋಳ, ರಾಗಿ, ಚಿಯಾ ಸೀಡ್ಸ್‌ ಮುಂತಾದ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆಯೂ ರೈತರಿಗೆ ಸಲಹೆ ನೀಡಲಾಯಿತು.  

ಮಾವು, ಗೋಡಂಬಿ, ಅಡಿಕೆ ಸೇರಿದಂತೆ ಬಹುವಾರ್ಷಿಕ ಬೆಳೆ ಬೆಳೆಗಾರರು ಸಾವಯವ ಹೊದಿಕೆ ಅಳವಡಿಕೆ, ಮಣ್ಣಿನ ತೇವಾಂಶ ಸಂರಕ್ಷಣೆ, ಗಿಡಗಳ ರಕ್ಷಣೆ, ಕಳೆ ನಿರ್ವಹಣೆ ಹಾಗೂ ಸಾವಯವ ಗೊಬ್ಬರ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಯಿತು.  ಇದೇ ವೇಳೆ ಖಾನಾಪುರ ತಾಲೂಕಿನಲ್ಲಿ ಮಾವು ಬೆಳೆಗಾರರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 31ರೊಳಗೆ ವಿಮೆ ಪಾವತಿಸುವಂತೆ ಇಲಾಖೆ ತಿಳಿಸಿದೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟದಿಂದ ಬೆಳೆಗಾರರಿಗೆ ವಿಮೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.