ಆಂಬ್ಯುಲೆನ್ಸ್ ದಾದಾ ಕರೀಮುಲ್ ಹಕ್
Ambulance Dada Karimul Haque
ಲೋಕದರ್ಶನ ವರದಿ
ಪಶ್ಚಿಮ ಬಂಗಾಲದ ಕರೀಮುಲ್ ಹಕ್ ಅವರು ‘ಆಂಬ್ಯುಲೆನ್ಸ್ ದಾದಾ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಬೈಕ್‌ನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ನೀಡಿ, 7000ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ ಜೀವಗಳನ್ನು ಉಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಉಚಿತವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ. 2017ರಲ್ಲಿ ಅವರು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರು ಬೈಕ್‌ಗೆ ಸೈಡ್ ಟ್ರಾಲಿ ಅಳವಡಿಸಿ, ಆಮ್ಲಜನಕ ಸೌಲಭ್ಯದೊಂದಿಗೆ ಉಚಿತವಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವದು ವಿಶೇಷವಾಗಿದೆ.
ಪಶ್ಚಿಮ ಬಂಗಾಲದ ಜಲ್ಪೈಗುರಿ ಜಿಲ್ಲೆಯ ಧಲಬರಿಯಂತಹ ಹಳ್ಳಿಗಳಲ್ಲಿ ವಾಸಿಸುವದು ಸುಲಭವಲ್ಲ. ಕರೀಮುಲ್ ಹಕ್ ಚಹಾ ತೋಟದಲ್ಲಿ ಕೆಲಸ ಮಾಡುವ ಉದ್ಯೋಗಿ, 1995ರಲ್ಲಿ ಹಕ್ ಅವರ ತಾಯಿಗೆ ಹೃದಯಾಘಾತವಾದಾಗ, ರಾತ್ರಿಯಿಡೀ ಎಷ್ಟು ಪ್ರಯತ್ನಿಸಿದರೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ತಲುಪಲು ಅವರಿಗೆ ವಾಹನ ನೀಡುವವರು ಯಾರು ಇರಲಿಲ್ಲ. ಹೀಗಾಗಿ ಸಕಾಲಿಕ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅವರ ತಾಯಿ ಹೃದಯಾಘಾತದಿಂದ ನಿಧನರಾದರು. ಕರೀಮುಲ್ ಬಡವರಾದರೂ, ಆ ದಿನದಿಂದಲೇ ಆಂಬ್ಯುಲೆನ್ಸ್ ಸೌಲಭ್ಯಗಳ ಕೊರತೆಯಿಂದಾಗಿ ಇನ್ನೊಬ್ಬ ವ್ಯಕ್ತಿ ಸಾಯಲು ಬಿಡುವದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ನಾಲ್ಕು ವರ್ಷಗಳ ನಂತರ ಹಕ್ ಕೆಲಸ ಮಾಡುತ್ತಿದ್ದ ಚಹಾ ತೋಟದಲ್ಲಿ ಸಹೋದ್ಯೋಗಿಯೊಬ್ಬರು ಪ್ರಜ್ಞೆ ತಪ್ಪಿದಾಗ, ಅವರು ತಮ್ಮ ಮ್ಯಾನೇಜರ್ ಬೈಕ್‌ನ್ನು ಎರರಲು ಪಡೆದು ಸ್ನೇಹಿತನನ್ನು ಜಲ್‌ಪೈ ಗುರಿಯ ತುರ್ತು ವಾರ್ಡ್‌ಗೆ ಕರೆದೊಯ್ದರು. ‘ಅವರು ಚೇತರಿಸಿಕೊಳ್ಳುವದನ್ನು ನಾನು ನೋಡುತ್ತಿದ್ದಂತೆ, ನನಗೆ ಒಂದು ಆಲೋಚನೆ ಬಂದಿತು. ನಾನು ಇನ್ನೂ ಅನೇಕ ಜನರಿಗೆ ಅದೇ ಸೇವೆಯನ್ನು ನೀಡಬಲ್ಲೇ’ ಎಂದು ಹಕ್ ಹೇಳುತ್ತಾರೆ. ಕಳೆದ 25 ವರ್ಷಗಳಲ್ಲಿ 62 ವರ್ಷದ ಹಕ್ ಅವರು ಅಂದಾಜು 7000 ಜನರನ್ನು ಅಗತ್ಯದ ಸಮಯದಲ್ಲಿ ಆಸ್ಪತ್ರೆ ತಲುಪಿಸಲು ಸಹಾಯ ಮಾಡಿದ್ದಾರೆಂದು ಅಂದಾಜಿಸಿದ್ದಾರೆ.
ಕೆಲವು ವರ್ಷಗಳ ಕಾಲ ಸೆಕೆಂಡ್ ಹ್ಯಾಂಡ್ ಬೈಕ್‌ನ್ನು ಬಳಸಿದ ನಂತರ, ಹಕ್ ಅವರು ಸಾಲ ಮಾಡಿ ಟಿವಿಎಸ್ 110ನ್ನು ಖರೀದಿಸಿದರು. ಅವರು ಹಳ್ಳಿಯಿಂದ 45 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವದು ಕಷ್ಟಕರವೆನಿಸುತ್ತಿತ್ತು. ಅಚ್ಚರಿಯೆಂದರೆ 10 ಕಿ.ಮೀ. ಅರಣ್ಯ ಪ್ರದೇಶದ ಮೂಲಕ ಬೈಕ್ ಸವಾರಿ ಮಾಡಿ, ಅವರು ಆಸ್ಪತ್ರೆ ತಲುಪುತ್ತಿದ್ದರು. ಹಕ್ ಅವರ ಪ್ರಾಮಾಣಿಕ ಸೇವೆಯನ್ನು ಮನಗಂಡು, 2016ರಲ್ಲಿ ಬಜಾಜ್ ಅಟೋ ಅವರಿಗೆ ಆಸ್ಪತ್ರೆಯ ಹಾಸಿಗೆಯ ಶೈಲಿಯ ಸೈಡ್ ಟ್ರಾಲಿನೊಂದಿಗೆ ಬಂದ ಬೈಕ್‌ನ್ನು ಉಡುಗೊರೆಯಾಗಿ ನೀಡಿತು. ಹೀಗಾಗಿ ಗರ್ಭಿಣಿಯರನ್ನು ಆಸ್ಪತ್ರೆಗೆ ತಲುಪಿಸುವದು ಹಕ್ ಅವರಿಗೆ ಸುಲಭವಾಯಿತು.
‘ಆಂಬ್ಯುಲೆನ್ಸ್ ದಾದಾ’ ಎಂದೇ ತನ್ನ ಪ್ರದೇಶದ ಎಲ್ಲರಿಗೂ ಪರಿಚಿತನಾಗಿರುವ ಹಕ್, ವರ್ಷದಿಂದ ವರ್ಷಕ್ಕೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಪೆಂಗ್ವಿನ್ ಇಂಡಿಯಾ ಕರೀಮುಲ್ ಹಕ್‌ರ ಜೀವನ ಚರಿತ್ರೆಯನ್ನು ಪ್ರಕಟಿಸಿದೆ. ಅವರಿಗೆ ದೇಶ ವಿದೇಶಗಳಿಂದ ದೇಣಿಗೆಗಳು ಹರಿದು ಬಂದಿವೆ. ಅವರು ದೇಣಿಗೆಗಳಿಂದ ಬಂದ ಹಣದಿಂದ ಸಾಂಕ್ರಾಮಿಕ ಸಮಯದಲ್ಲಿ ಪ್ರತಿದಿನ 200 ಬಡವರಿಗೆ ಆಹಾರವನ್ನು ನೀಡತೊಡಗಿದರು. ಅವರು ತಮ್ಮ ಮನೆಯ ಮೂಲೆಯನ್ನು ಸಣ್ಣ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ. ಕರೆಗಳ ಮೂಲಕ ನಗರದ ವೈದ್ಯರನ್ನು ಸಂಪರ್ಕಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯತ್ತಾರೆ.
ಅವರು ಮಕ್ಕಳಿಗಾಗಿ ಉಚಿತ ಟೇಕ್ವಾಂಡೋ ತರಬೇತಿ ಶಾಲೆಯನ್ನು ಸಹ ನಡೆಸುತ್ತಿದ್ದಾರೆ. ಧಲಬರಿ ಪ್ರದೇಶದ ಜನರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸಲು ತಮಗೆ ಬಂದ ನಿಧಿಯಿಂದ ಅವರು ಬಡವರಿಗಾಗಿ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದಾರೆ. ಚಹಾ ತೋಟದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೂ, ಅವರು ಎಂತಹ ಪರಿಸ್ಥಿತಿಯಲ್ಲಿಯೂ ಮೋಟರ್ ಬೈಕ್ ಆಂಬ್ಯುಲೆನ್ಸ್ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿದ್ದಾರೆ. 2017ರಲ್ಲಿ ಅವರಿಗೆ ಗ್ರಾಮೀಣ ಆರೋಗ್ಯ ಸೇವೆಯಲ್ಲಿಯ ಅತ್ಯುತ್ತಮ ಸೇವೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, 2018ರಲ್ಲಿ ಟೆಡ್ ಎಕ್ಸ್ ಪುರಸ್ಕಾರ ಹಾಗೂ 2021ರಲ್ಲಿ ಕೌನ್ ಬನೇಗಾ ಕರೋಡ್ ಪತಿಯಿಂದ ರಾಷ್ಟ್ರೀಯ ಮನ್ನಣೆ ದೊರೆತಿದೆ.
ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ವಾಸಿಸುವ ಧಲಭರಿಯಲ್ಲಿ ಆಂಬ್ಯುಲೆನ್ಸ್ ಸೇವೆಯ ಆಸ್ಪತ್ರೆ, ನರ್ಸ್ ತರಬೇತಿ ಸೌಲಭ್ಯ ಮತ್ತು ಹೊಲಿಗೆ ಸಂಸ್ಥೆ ಒಳಗೊಂಡಂತೆ ಹಕ್ ಅವರ ಪುಟ್ಟ ಹೊಲದಲ್ಲಿವೆ. ಇಂಡಿಯನ್ ಆಯಿಲ್ ಕಾರ್ೋರೇಷನ್, ಎಂಎನ್‌ಸಿ. ಬಜಾಜ ಗ್ರೂಪ್, ಸೊಸೈಟಿ ಫಾರ್ ಟೆಕ್ನಾಲಜಿ ವಿಥ್ ಎ ಹ್ಯೂಮನ್ ಫೇಸ್, ಟ್ಯಾಗೋರ ಸೇನ್ ಗುಪ್ತಾ ಫೌಂಡೇಶನ್ ಮುಂತಾದವುಗಳು ಹಕ್ ಅವರ ಮಾನವೀಯ ಸೇವೆಯನ್ನು ಗೌರವಿಸಿ ಅನುದಾನವನ್ನು ನೀಡಿವೆ. ಇಲ್ಲಿಯವರೆಗೆ ಅವರು ಪಶ್ಚಿಮ ಬಂಗಾಲದ 20 ಹಳ್ಳಿಗಳಲ್ಲಿ ಮೋಟರ್ ಬೈಕ್ ಆಂಬ್ಯುಲೆನ್ಸ್ ಸೇವೆಯಿಂದ 7000 ಕ್ಕೂ ಹೆಚ್ಚು ಜನರ ಜೀವಗಳನ್ನು ಉಳಿಸಿದ್ದಾರೆ. ‘ಜೀವ ಉಳಿಸುವುದಕ್ಕಿಂತ ಹೆಚ್ಚು ಪ್ರತಿಫಲದಾಯಕವಾದದ್ದು ಯಾವದೂ ಇಲ್ಲ’ ಎಂದು ಆಂಬ್ಯುಲೆನ್ಸ್ ದಾದಾ ಹಕ್ ಹೇಳುತ್ತಾರೆ.
ಸುರೇಶ ಗುದಗನವರ ಲೇಖಕರು
9449294694
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 