ಬೆಂಗಳೂರು, ಏ. 14, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೌರವ ನಮನ ಸಲ್ಲಿಸಿದ್ದಾರೆ.ಅಂಬೇಡ್ಕರ್ ಮತ್ತು ಅವರ ಸಾಮಾಜಿಕ ನ್ಯಾಯದ ವಿಚಾರಗಳು ಭಾರತದಲ್ಲಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ ಎಂದು ದೇವೇಗೌಡರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಭಾರತದ ಸಂವಿಧಾನದ ವಾಸ್ತುಶಿಲ್ಪಿಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸುವುದಾಗಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ದೇಶವೊಂದು ನೆಮ್ಮದಿಯಿಂದ ಪ್ರಗತಿಯ ಕಡೆಗೆ ಹೆಜ್ಜೆ ಇಡಲು ಬೇಕಾದ ಶಿಕ್ಷಣ, ಜ್ಞಾನ, ಸಮಾನತೆ, ಭ್ರಾತೃತ್ವ, ಮಾನವೀಯತೆ, ಜಾತ್ಯತೀತತೆ ಇದೆಲ್ಲದಕ್ಕೂ ಮತ್ತೊಂದು ಹೆಸರೇ ಅಂಬೇಡ್ಕರ್. ಅಂಬೇಡ್ಕರ್ ಚಿಕಿತ್ಸಕ ಚಿಂತನೆಗಳು ನಮ್ಮ ಇಂದಿನ ಅಗತ್ಯ. ಜನ್ಮಜಯಂತಿಯ ಈ ಹೊತ್ತಲ್ಲಿ ಅಂಬೇಡ್ಕರ್ ಅವರನ್ನು ನಾನು ಸ್ಮರಿಸುತ್ತೇನೆ.ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆ ರೂಪಿಸಬೇಕು. ಇಲ್ಲವಾದರೆ ಬಡವರಿಗೆ ಫಲವೇ ಸಿಗದು ಎಂಬ ಅಂಬೇಡ್ಕರ್ ಅವರ ಮಾತು ಎಂದಿಗೂ ಪ್ರಸ್ತುತ. ಈ ಚಿಂತನೆಯನ್ನು ನಾನು ಬಲವಾಗಿ ನಂಬಿದ್ದೇನೆ. ವಿವಿಧತೆಗಳ ಈ ದೇಶ ಐಕ್ಯತೆಯಿಂದ ಹೆಜ್ಜೆ ಇಟ್ಟದ್ದು ಅಂಬೇಡ್ಕರ್ ರಚಿತ ಸಂವಿಧಾನದ ದಾರಿದೀವಿಗೆಯಲ್ಲಿ ಎಂದು ಅವರು ತಿಳಿಸಿದ್ದಾರೆ.