ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಹತ್ವ ತಿಳಿಸಿದ ಅಮರೇಶ್ವರ ಮಹಾರಾಜರು

ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಹತ್ವ ತಿಳಿಸಿದ ಅಮರೇಶ್ವರ ಮಹಾರಾಜರು  Amareshwara Maharaja explained the importance of technical education to students

ರಾಯಬಾಗ, ಜು.09: ರೈತರ ನೀರಿನ ಸಮಸ್ಯೆ ಪರಿಹರಿಸಿ, ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಡ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ದೊರಕುವಂತೆ ಮಾಡಿದ ಶಿಕ್ಷಣ ಪ್ರೇಮಿ ವಸಂತರಾವ್ ಪಾಟೀಲ (ಅಭಾಜಿ) ಅವರನ್ನು ಸದಾ ಸ್ಮರಿಸಬೇಕು ಎಂದು ಕೌಲಗುಡ್ಡ ಹಾಗೂ ಹಣಮಾಪೂರ ಸಿದ್ಧಸಿರಿ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.  ಇತ್ತೀಚೆಗೆ ರಾಯಬಾಗ ಡಿಪ್ಲೊಮಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬೋಧನಾ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  “ಕೇವಲ ಪುಸ್ತಕದ ಶಿಕ್ಷಣ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಗುರುಗಳು, ಪೋಷಕರು ಹಾಗೂ ಸಮಾಜದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಸಂಸ್ಕಾರ ಮತ್ತು ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಮುಖ್ಯ,” ಎಂದು ಅವರು ಹೇಳಿದರು.  

ಎಸ್‌ಆರ್‌ಎಸ್‌ಎಲ್ ರಾಯಬಾಗ ಘಟಕದ ಜನರಲ್ ಮ್ಯಾನೇಜರ್ ಸಂಗಮನಾಥ ಜಮಾದಾರ ಮಾತನಾಡಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳೊಂದಿಗೆ ನೇರ ಸಂಪರ್ಕ ಕಲ್ಪಿಸಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ವಿವಿಧ ಕಂಪನಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.  “ಡಿಪ್ಲೊಮಾ ಶಿಕ್ಷಣವು ವೃತ್ತಿಪರ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಉತ್ತಮ ವೇದಿಕೆಯಾಗಿದೆ,” ಎಂದು ಅವರು ತಿಳಿಸಿದರು.  

ಕಾರ್ಯಕ್ರಮದಲ್ಲಿ ಎಸ್‌ಆರ್‌ಎಸ್‌ಎಲ್ ರಾಯಬಾಗ ಘಟಕದ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ ಕಿಲ್ಲೇದಾರ, ಹಿರಿಯ ಕಬ್ಬು ವ್ಯವಸ್ಥಾಪಕ ವಿರೂಪಾಕ್ಷ ಕರಲಿಂಗಣ್ಣವರ, ಪ್ರಾಚಾರ್ಯ ಭರತೇಶ್ ದಡ್ಡಿ, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಮಲ್ಲಿಕಾರ್ಜುನ ಜೇಡರ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಉಪನ್ಯಾಸಕ ರಾಜನ್ ಅನ್ವೇಕರ್ ಸ್ವಾಗತಿಸಿದರು. ಚಂದ್ರಕಾಂತ ಒಡೆಯರ್ ನಿರೂಪಿಸಿದರು ಹಾಗೂ ಆದಿತ್ಯ ಬೆಳಗಾಂವಕರ ವಂದಿಸಿದರು.