ಶಿಕ್ಷಣದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನೂ ಕಲಿಸಿ: ಶಾಸಕ ರಾಜುಗೌಡ
Along with education, teach children good morals: MLA Rajugowda
ತಾಳಿಕೋಟಿ 22: ನನ್ನ ಮತ ಕ್ಷೇತ್ರದ ಮೈಲೇಶ್ವರ ಎಂಬ ಒಂದು ಸಣ್ಣ ಗ್ರಾಮದಲ್ಲಿ ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಗ್ರಾಮೀಣ ಪ್ರತಿಭೆಗಳನ್ನು ರಾಜ್ಯಮಟ್ಟಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವ ಈ ಸಂಸ್ಥೆ ಗ್ರಾಮೀಣ, ಬಡ, ರೈತರ ಮಕ್ಕಳ ಭವಿಷ್ಯದ ಆಶಾಕಿರಣವಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು. ತಾಲೂಕಿನ ಮೈಲೇಶ್ವರ ಗ್ರಾಮದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಗಂಗಾ ಅಶೋಕ ಕೋಳೂರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರು ತಮ್ಮ ವತಿಯಿಂದ ಶುಕ್ರವಾರ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗಂಗಾ ಕೋಳೂರಗೆ ಸನ್ಮಾನಿಸಿ ಮಾತನಾಡಿದರು.
ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದು ಇದೀಗ ಗಂಗಾ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ನನ್ನ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಅವಳ ಈ ಸಾಧನೆಯಲ್ಲಿ ಹಗಲಿರಳು ಶ್ರಮಿಸಿದ ಈ ಸಂಸ್ಥೆಯ ಆಡಳಿತ ಮಂಡಳಿ ಶಿಕ್ಷಕ ವರ್ಗ ಹಾಗೂ ವಿಶೇಷವಾಗಿ ವಿದ್ಯಾರ್ಥಿನಿಯ ಪೋಷಕರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಎಂಥಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಉತ್ತಮ ಉಧಾಹರಣೆಯಾಗಿದ್ದಾಳೆ, ಅವಳ ಈ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಸಂಸ್ಕಾರಗಳನ್ನು ನೀಡುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ನಾನು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಮಡುಸೌಕಾರ ಬಿರಾದಾರ ಅವರು ಶಾಸಕ ರಾಜುಗೌಡ ಪಾಟೀಲ ಅವರು ಶಿಕ್ಷಣ ಹಾಗೂ ಕೃಷಿಗೆ ಹೆಚ್ಚು ಒತ್ತು ನೀಡಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ವಿದ್ಯಾರ್ಥಿನಿ ಗಂಗಾ ಕೋಳೂರ ಅವರ ಈ ಸಾಧನೆ ಶಾಸಕರಿಗೆ ಇನ್ನಷ್ಟು ಹುಮ್ಮಸ್ಸು ತಂದು ಕೊಟ್ಟಿದೆ. ಸಾಧನೆ ಎಂಬುದು ಯಾರ ಸ್ವತ್ತು ಅಲ್ಲ ಅದು ಯಾರು ಪರಿಶ್ರಮ ವಹಿಸುತ್ತಾರೋ ಅವರಿಗೆ ವಲಿಯುತ್ತದೆ.
ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಬಲಿ ಯಾಗದೇ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಮಾರುತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ಮಡಿವಾಳರ ಮಾತನಾಡಿ ಶಾಸಕ ರಾಜುಗೌಡರು ನಮ್ಮ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿನಿ ಕೋಳೂರ ಅವರಿಗೆ ಗೌರವಿಸಿರುವುದು ಅವರಿಗೆ ಶಿಕ್ಷಣದ ಕುರಿತು ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಅವರೊಬ್ಬ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಸರಳ ಸಜ್ಜನ ರಾಜಕಾರಣಿ ಸದಾ ಜನಸಾಮಾನ್ಯರೊಂದಿಗೆ ಇರುವ ವ್ಯಕ್ತಿ ಅವರ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ ಅವರ ಈ ಕಾರ್ಯ ನಮಗೆಲ್ಲರಿಗೂ ಸ್ಪೂರ್ತಿ ತಂದು ಕೊಟ್ಟಿದೆ ಎಂದರು. ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ ಇವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ.ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ಆರ್ ಬಿ ನಡುವಿನಮನಿ, ತಾಪಂ ಮ್ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ವೀರೇಶಗೌಡ ಪಾಟೀಲ, ಉಮೇಶ ಮೈಲೇಶ್ವರ, ಅಪ್ಪು ಕುಳಗೇರಿ, ಪಿಡಿಒ ಪ್ರಭು ಚೆನ್ನೂರ, ಸಂಸ್ಥೆಯ ನಿರ್ದೇಶಕರಾದ ಎಸ್.ಎಚ್.ಪಾಟೀಲ, ಲೀಲಾದೇವಿ ಎಂ.ಬಿರಾದಾರ, ನಿರ್ಮಲಾ.ಎಸ್.ಗಡಗಿ, ಡಾ.ಶಶಿಧರ ಬಿರಾದಾರ, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಡಾ.ವಿನಾಯಕ ಪಟಗಾರ, ಆಂಗ್ಲ ಮಾಧ್ಯಮ ಮುಖ್ಯೋ ಪಾಧ್ಯಾಯ ಬಿ.ಜಿ.ಕರಕಳ್ಳಿ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 