ಮಾಲಿನ್ಯ ಕಾರ್ಯ ಮುಂದುವರೆಸುವ ಕಾರ್ಖಾನೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶ - ಪಿ.ಎಂ.ನರೇಂದ್ರಸ್ವಾಮಿ

ಮಾಲಿನ್ಯ ಕಾರ್ಯ ಮುಂದುವರೆಸುವ ಕಾರ್ಖಾನೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶ - ಪಿ.ಎಂ.ನರೇಂದ್ರಸ್ವಾಮಿ Allow factories that continue to pollute to be permanently shut down - PM Narendra Swamy

ಲೋಕದರ್ಶನ ವರದಿ  

           ಕೊಪ್ಪಳ  13: ಕಾನೂನು ಅಡಿಯಲ್ಲಿ ಸ್ಥಾಪಿತವಾದ ಉದ್ಯಮವನ್ನು ಶಾಶ್ವತವಾಗಿ ನಿಲ್ಲಿಸಲು ಕಾನೂನಿನಲ್ಲಿ ಅಡ್ಡಿ ಬರುತ್ತದೆ. ಆದರೆ, ಮಾಲಿನ್ಯ ಕಾರ್ಯವನ್ನು ಮುಂದುವರೆಸುವ ಕಾರ್ಖಾನೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಅವರು ಶುಕ್ರವಾರ ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ್ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ವಾಯು ಮಾಲಿನ್ಯ ಸಮಸ್ಯೆಗಳ ಬಗ್ಗೆ ಪರೀಶೀಲಿಸಿ ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ನಿಯಮದಡಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ನೆಲ, ಜಲ, ವಾಯು ಮಾಲಿನ್ಯವನ್ನು ನಿತ್ರಣ ಮಾಡುವುದಕ್ಕಾಗಿ ನಮ್ಮ ಮಂಡಳಿ ಸ್ಥಾಪನೆಯಾಗಿದೆ. ಬಾದಿತ ಜನರ ಸಮಸ್ಯೆಯನ್ನು ಬಗೆಹರಿಸಲು ಹಿರೇಬಗನಾಳ್‌ಗೆ ಭೇಟಿ ನೀಡಿರುವೆ. ಈ ಗ್ರಾಮಕ್ಕೆ ಬರುವುದಕ್ಕೆ ಮುಂಚೆ ಇಲ್ಲಿನ ಸಮಸ್ಯೆಗಳ ಕುರಿತು ಮಾಧ್ಯಮಗಳ ವರದಿ, ಗ್ರಾಮಸ್ಥರ ದೂರುಗಳನ್ನು ಗಮನಿಸಿದೇನೆ. ಈ ವಿಚಾರವಾಗಿ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ನೀಡಿರುವ ವರದಿಯನ್ನು ಸಹ ನೋಡಿದ್ದೇನೆ.

            ಈಗಾಗಲೇ ಹಲವಾರು ಸೂಚನೆಗಳನ್ನು ಕಾರ್ಖಾನೆಗಳಿಗೆ ನೀಡಲಾಗಿದ್ದು, ಪರಿಣಾಮಕಾರಿಯಾದ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅವರ ಜವಾಬ್ದಾರಿಯಾಗಿದೆ. ಈಗ ಅನಿವಾರ್ಯವಾದ ಪರಿಸ್ಥಿತಿಗೆ ಕಾರ್ಖಾನೆಗಳೆ ಸಮಸ್ಯೆಯನ್ನು ತಂದು ಕೊಂಡಿವೆ. ಇಂದಿನ ಈ ಭೇಟಿ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಗಳ ತಂಡವು ಅನೀರೀಕ್ಷಿತವಾಗಿ ಭೇಟಿ ನೀಡಿ, ಪರೀಶೀಲನೆ ಕೈಗೊಂಡು ವರದಿ ಸಿದ್ಧಪಡಿಸಲು ಇಲ್ಲಿಗೆ ಕಳುಹಿಸಲಾಗಿತ್ತು. ಈ ತಂಡವು ನನಗೆ ವರದಿ ತಲುಪಿಸಲು ಸಿದ್ಧತೆಯನ್ನು ಕೈಗೊಂಡಿದೆ. ಇದರ ಬಗ್ಗೆ ಕೂಲಂಕಷವಾಗಿ ಪರೀಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.  

ಕಾನೂನು ಅಡಿಯಲ್ಲಿ ಸ್ಥಾಪಿತವಾದ ಉದ್ಯಮವನ್ನು ಶಾಶ್ವತವಾಗಿ ನಿಲ್ಲಿಸಲು ಕಾನೂನಿನಲ್ಲಿ ಅಡ್ಡಿ ಬರುತ್ತದೆ. ಆದರೆ, ಮಾಲಿನ್ಯ ಕಾರ್ಯ ಮುಂದುವರೆಸಿದರೆ, ಅವುಗಳನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶವಿದೆ. ಹಾಗಾಗಿ ಮಾಲಿನ್ಯ ಕಾರ್ಯವನ್ನು ಸರಿಪಡಿಸಲು ಅವರಿಗೆ ಅವಕಾಶ ಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ನೋಟೀಸ್ ನೀಡಲಾಗಿದೆ. ಇದು ಕೊನೆಯ ಅವಕಾಶವಿದ್ದು, ಸಮಸ್ಯೆಗಳನ್ನು ಸರಿಪಡಿಸಲು ಯಾವ ತಾಂತ್ರಿಕ ವಿಚಾರಗಳಿವೆ, ಅವುಗಳ ಬಗ್ಗೆ ಸಂಬಂಧಿಸಿದ ಕಾರ್ಖಾನೆಗಳು ತಾಂತ್ರಿಕ ವರದಿಯೊಂದಿಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ತಪ್ಪಿದ್ದಲ್ಲಿ ನಿಯಮಗಳಡಿ ಕಾನೂನು ಕ್ರಮ ಕೈಗೊಳ್ಳಲು ಶತಸಿದ್ದ. ಜನರ ಜೀವನದ ಜೊತೆ ಚೆಲ್ಲಾಟವಾಡಲು ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಯಾರಿಗೂ ಅವಕಾಶವನ್ನು ನೀಡುವುದಿಲ್ಲ ಎಂಬ ಬದ್ಧತೆಯ ಮಾತನ್ನು ನಾನು ನಿಮ್ಮ ಮುಂದೆ ಹೇಳುತ್ತೇನೆ. ಬಾದಿತ ಜನರ ನೋವು, ಸಂಕಷ್ಟ, ಆರೋಗ್ಯ ಮತ್ತು ಎಲ್ಲಾ ವಿಚಾರಗಳು ನಮ್ಮ ಅರಿವಿನಲ್ಲಿದ್ದು, ಮಂಡಳಿಯು ಜನಸಾಮಾನ್ಯರ ಪರವಾಗಿದೆ ಎಂದು ಹೇಳಿದರು.  

ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಹಿರೇಬಗನಾಳ ಮತ್ತು ಕಾಸರಕಂಡಿ ಕುಣಿಕೇರಿ ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳು ಕುಣಿಕೇರಿ ತಾಂಡ ಹಾಗೂ ಹಾಲವರ್ತಿ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ವಿವಿಧ ಕಂಪನಿಗಳಿಂದ ಆಗುವಂತಹ ಧೂಳಿನಿಂದ ಆಯಾ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಅರ್ಜಿಯನ್ನು ಕೊಟ್ಟಿದ್ದಾರೆ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ವಾಸ್ತವಿಕತೆಯನ್ನು ಅಧ್ಯಕ್ಷರ ಗಮನಕ್ಕೆ ತಂದು, ಅದಕ್ಕೆ ಕ್ರಮ ಕೈಗೊಳ್ಳಲು ಅವಕಾಶ ಮಾಡಿ ಕೊಡೋಣ ಎಂದರು. 

ಬಾದಿತ ಗ್ರಾಮಗಳನ್ನು ಸ್ಥಳಾಂತರ ಮಾಡಲು ಅಥವಾ ಕಂಪನಿಗಳನ್ನು ಸ್ಥಳಾಂತರ ಮಾಡಲು ಈ ಹಿಂದೆ ಮನವಿ ಮಾಡಲಾಗಿತ್ತು. ನಮ್ಮ ಭಾಗದಲ್ಲಿ 1996ರಿಂದ ಕಂಪನಿಗಳು ಬರತ್ತಾ ಇದ್ದು, 2008 ರಿಂದಲೇ ಇವುಗಳ ವಿರೋಧ ಆಗುತ್ತಿದೆ. ಇವತ್ತು ನಮ್ಮ ಭಾಗದಲ್ಲಿ ಸುಮಾರು 35 ಕ್ಕೂ ಹೆಚ್ಚು ಕಾರ್ಖಾನೆಗಳು ಇದ್ದು, ಅದರಲ್ಲಿ ಕೆಲವು ದೂಳು ಮುಕ್ತ ಕಾರ್ಖಾನೆಗಳಿವೆ. ಇನ್ನುಳಿದ ಕಾರ್ಖಾನೆಗಳು ದೂಳನ್ನು ಹೋಗಲಾಡಿಸಲು ಯಾವುದೇ ಕ್ರಮ ವಹಿಸುತ್ತಿಲ್ಲ. ಹಾಗಾಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಮತ್ತು ಕೃಷಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಉದ್ದೇಶದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಇಂದು ಭೇಟಿ ನೀಡಿದ್ದಾರೆ. ಎಲ್ಲಾ ಗ್ರಾಮಗಳನ್ನು ದೂಳು ಮುಕ್ತ ಗ್ರಾಮ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು. 

ಮಾಜಿ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದ ಹಿರೇಬಗನಾಳ ಮತ್ತು ಇತರೆ ಗ್ರಾಮಗಳ ಸಾರ್ವಜನಿಕರು ಸುಮಾರು ದಿನಗಳಿಂದ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದ್ದಾರೆ. ಇದು ಒಂದು ನಿರಂತ ಸಮಸ್ಯೆ ಆಗಿದೆ. ಕಾರ್ಖಾನೆಗಳು ತಮ್ಮ ಲಾಭಕೋಸ್ಕರ ಜನರ ಬದುಕಿಗೆ ಮತ್ತು ಮಕ್ಕಳ ಭವಿಷ್ಯಕ್ಕೆ ಸಮಸ್ಯೆಯಾಗಬಾರದು. ಕಾರ್ಖಾನೆಯ ಧೂಳಿನಿಂದ ಪ್ರಾಣಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಗಾಳಿಯಲ್ಲಿ ತೊಂದರೆ ಆಗುತ್ತಿದೆ. ನೀರಿನಲ್ಲಿ ತೊಂದರೆ ಆಗುತ್ತಿದೆ ಎಂದರು.  

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಜಿಲ್ಲೆಯ ಹಿರೇಬಗನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲ, ಜಲ ಮತ್ತು ವಾಯು ಮಾಲಿನ್ಯದ ಪರಿಣಾಮಗಳ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, ಜನರ ಆರೋಗ್ಯ ಮತ್ತು ಕೃಷಿ ಉತ್ಪಾದನೆ ಮೇಲೆ ಪರಿಣಾಮಗಳು ಕಂಡು ಬಂದಿರುತ್ತದೆ. ಗ್ರಾಮಸ್ಥರು ಹಾಗೂ ಹೋರಾಟಗಾರರು ನೀಡಿದ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರೀಶೀಲಿಸಿದೆ. ಈ ವೇಳೆ ಮಾಲಿನ್ಯದಿಂದ ಜನರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ, ಕೃಷಿ ಹಾಗೂ ತೋಟಗಾರಿಕೆ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಮನದಟ್ಟುಗೊಳಿಸಲಾಗಿದೆ ಎಂದು ಅವರು ಹೇಳಿದರು. 

ಹಿರೇಬಗನಾಳ ಗ್ರಾಮದಲ್ಲಿ ಆರೋಗ್ಯ ಸರ್ವೆ ಹಾಗೂ ಸ್ಕ್ರೀನಿಂಗ್ ಕಾರ್ಯ ನಡೆಸಲಾಗಿದ್ದು, ಉಳಿದ ಗ್ರಾಮಗಳಲ್ಲಿ ಸಹ ಆರೋಗ್ಯ ಸಮೀಕ್ಷೆ ಪ್ರಾರಂಭಿಸಲಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸರ್ಕಾರದ ಮೂಲಕ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ಗೆ ಮನವಿ ಕಳುಹಿಸಲಾಗಿದೆ. ಹಿರೇಬಗನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಸಮೀಕ್ಷೆಯಲ್ಲಿ ಸುಮಾರು 122 ಜನರಿಗೆ ಮೇಲ್ಶಾ-್ವಸಕೋಶ ಸಂಬಂಧಿತ ಕಾಯಿಲೆಗಳು, 49 ಜನರಿಗೆ ಚರ್ಮ ರೋಗ, 18 ಜನರಿಗೆ ಕ್ಯಾಟ್ರಾಕ್ಟಿವ್, 48 ಜನರಿಗೆ ಕಣ್ಣಿನ ಸಮಸ್ಯೆಗಳು, 78 ಜನರಿಗೆ ಮೊಣಕಾಲು ನೋವು, 29 ಜನರಿಗೆ ಟಿಬಿ, 3 ಜನರಿಗೆ ಸ್ಟ್ರೋಕ್, 1 ಕ್ಯಾನ್ಸರ್ ಹಾಗೂ ಪ್ರೈಮರಿ ಇನ್ಫೆರ್ಟಿಲಿಟಿ ಪ್ರಕರಣ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದರು.  

ಕೃಷಿ ಕ್ಷೇತ್ರದಲ್ಲಿಯೂ ಪರಿಣಾಮ ಕಂಡು ಬಂದಿದ್ದು, ಬೆಳೆ ಕಾಟಾವು ಪ್ರಯೋಗದಲ್ಲಿ ಸುಮಾರು 40 ರಿಂದ 50 ಶೇಕಡಾ ಇಳುವರಿ ಕಡಿಮೆಯಾಗಿರುವುದು ತಿಳಿದು ಬಂದಿದೆ. ಪಪಾಯ ಬೆಳೆಗಳಲ್ಲಿ ಮೇಲೆ ಕಪ್ಪಿ ಚುಕ್ಕೆಗಳು, ಈರಳ್ಳಿಗಳ ಮೇಲೆ ಬೂದು ಬರುವಂತಹ ಲಕ್ಷಣಗಳು ಕಂಡುಬಂದಿದ್ದು, ಇದರಿಂದ ಇಳುವರಿ ಕುಸಿತವಾಗಿದೆ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ, ತಾತ್ಕಾಲಿಕ (ಖಠಣ ಖಿಜಡಿಟ) ಮತ್ತು ದೀರ್ಘಕಾಲಿಕ (ಐಠರ ಖಿಜಡಿಟ) ಕ್ರಮಗಳ ಬಗ್ಗೆ ಸೂಚನೆ ನೀಡಿದೆ. ವಿಶೇಷವಾಗಿ ಸಾರಿಗೆ ಮೂಲಕ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು. 

ಹೋರಾಟಗಾರರಾದ ಡಾ. ಅಲ್ಲಮಪ್ರಭು ಬಟ್ಟದೂರು ಅವರು ಮಾತನಾಡಿ, ಹೀರೇಬಗನಾಳ, ಕಾಸನಕಂಡಿ, ಸೇರಿದಂತೆ ಇಪ್ಪತ್ತು ಗ್ರಾಮಗಳ ಸಮಸ್ಯೆ ಒಂದೆ ಇದೆ. ಈ ಇಪ್ಪತ್ತು ಗ್ರಾಮದ ಪರಿಸರ ಸರಿಯಾಗಬೇಕು. ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಂದ ಇಲ್ಲಿನ ಜನರ ಆರೋಗ್ಯ ತಪಾಸಣೆ ಸರ್ವೆ ಹಾಗಬೇಕು. ತಜ್ಞಾ ವಿಜ್ಞಾನಗಳಿಂದ ಪರಿಸರದ ಸರ್ವೆ ಆಗಬೇಕು ಎಂದು ವಿವರವಾಗಿ ಮಾತನಾಡಿದರು.  

ಇದೇ ವೇಳೆ ಹಿರೇಬಗನಾಳ ಗ್ರಾಮಸ್ಥರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಬಳಿ, ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್‌. ಅರಸಿದ್ದಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಕೊಪ್ಪಳ ಜಿಲ್ಲೆಯ ರೈತಪರ ಮತ್ತು ಪರಿಸರ ಹಿತ ರಕ್ಷಣಾ ಹೋರಾಟ ಸಮಿತಿಗಳು ಹಾಗೂ ಹಿರೇಬಗನಾಳ ಗ್ರಾಮಸ್ಥರು, ಮಹಿಳೆಯರು ಉಪಸ್ಥಿತರಿದ್ದರು.