200ಕ್ಕೂ ಹೆಚ್ಚು ರೈತರಿಗೆ ವಂಚನೆ ಆರೋಪ: ಮಿಡಿ ಸೌತೆ ಖರೀದಿಸಿದ ಕಂಪನಿ ವಿರುದ್ಧ ಆಕ್ರೋಶ

200ಕ್ಕೂ ಹೆಚ್ಚು ರೈತರಿಗೆ ವಂಚನೆ ಆರೋಪ: ಮಿಡಿ ಸೌತೆ ಖರೀದಿಸಿದ ಕಂಪನಿ ವಿರುದ್ಧ ಆಕ್ರೋಶ  Allegations of cheating over 200 farmers: Outrage against company that purchased baby cucumbers

ಹೂವಿನಹಡಗಲಿ 7: ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳ 200ಕ್ಕೂ ಹೆಚ್ಚು ರೈತರಿಂದ ಮಿಡಿ ಸೌತೆ ಖರೀದಿಸಿದ ಖಾಸಗಿ ಕಂಪನಿಯೊಂದು ಸಂಪೂರ್ಣ ಹಣ ಪಾವತಿಸದೆ ವಂಚನೆ ಮಾಡಿದೆ ಎಂದು ರೈತರು ಹಾಗೂ ರಾಜ್ಯ ರೈತ ಸಂಘ ಆರೋಪಿಸಿದ್ದಾರೆ.  ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಎಚ್‌. ಸಿದ್ದಪ್ಪ, ರೈತರಿಂದ ಸುಮಾರು 980 ಟನ್ ಮಿಡಿ ಸೌತೆ ಖರೀದಿಸಿದ ಕಂಪನಿ ಕೇವಲ ಶೇ.75ರಷ್ಟು ಹಣವನ್ನು ಮಾತ್ರ ಪಾವತಿಸಿದ್ದು, ಉಳಿದ ಶೇ.25ರಷ್ಟು ಹಣವನ್ನು ಇದುವರೆಗೆ ನೀಡಿಲ್ಲ ಎಂದು ದೂರಿದರು. ಒಂದು ಎಕರೆಗೆ 10ರಿಂದ 12 ಟನ್ ಮಿಡಿ ಸೌತೆ ಉತ್ಪಾದನೆಯಾಗಿದ್ದು, ರೈತರಿಂದ ನಾಲ್ಕು ವಿವಿಧ ತಳಿಗಳ ಬೆಳೆಯನ್ನು ಕಂಪನಿ ಖರೀದಿಸಿದೆ. ಆದರೆ ಸಂಪೂರ್ಣ ಹಣ ಪಾವತಿಸದೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಆರೋಪಿಸಿದರು.  

ಬೆಂಗಳೂರು ಮೂಲದ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಯಡಮುದು ಗ್ರಾಮದಲ್ಲಿರುವ ಇಂಡಿಯಾ ಆಗ್ರೋ ಎಕ್ಸ್ಪೋರ್ಟ್‌ ಕಂಪನಿಯ ಮುಖ್ಯಸ್ಥ ಸಿದ್ದನಗೌಡ ಧಾರವಾಡ ಹಾಗೂ ಸಂಜೀವಕಟ್ಟೆ ಬೆಂಗಳೂರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ರೈತರು ಆರೋಪ ಮಾಡಿದ್ದಾರೆ. ಕಂಪನಿಯು ಬೀಜ, ರಸಗೊಬ್ಬರ ಹಾಗೂ ಓಷಧಿಗಳನ್ನು ನೀಡಿ ಬೆಳೆ ಬೆಳೆಸಿಸಿ, ಬಳಿಕ ರೈತರಿಗೆ ಬರಬೇಕಾದ ಬಾಕಿ ಹಣವನ್ನು ನೀಡದೆ ವಂಚಿಸಿದೆ ಎಂದು ಹೇಳಿದರು.  ಈ ಸಂಬಂಧ ಹೂವಿನಹಡಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದಾಗಿ ಹಾಗೂ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.  

ಈ ಸಂದರ್ಭದಲ್ಲಿ ಮಿಡಿ ಸೌತೆ ಬೆಳೆಗಾರರು ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.  ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಬಿ.ಎಚ್‌.ಎಂ. ವಿಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಹುಲಗಪ್ಪ, ಮಜೂರ್ ರೆಹಮಾನ್, ಕೆ. ಮಂಜುನಾಥ್, ಕೆ. ಗನಿಸಾಬ್, ಕೃಷ್ಣನಾಯ್ಕ, ಕೋಟ್ರೇಶ್ ನಾಯ್ಕ, ನಾಗಯ್ಯ ನಾಯ್ಕ, ವೀರನಾಯ್ಕ ಸೇರಿದಂತೆ 20ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.