ರಾಯಬಾಗ 19: ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಇಒ ಬಸವರಾಜಪ್ಪ ಆರ್. ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳಡಿಸಿಕೊಳ್ಳಲಾಗಿದೆ. ಈ ಬಾರಿ ಒಳ್ಳೆಯ ಫಲಿತಾಂಶ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ ಒಟ್ಟು 7635 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. 24 ವಿದ್ಯಾರ್ಥಿಗಳಿಗೆ ಒಂದರಂತೆ ಒಟ್ಟು 318 ಪರೀಕ್ಷಾ ಕೊಠಡಿಗಳನ್ನು ತೆರೆಯಲಾಗಿದೆ. ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಕಸ್ಟೋಡಿಯನ್, ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧಿನಾಧಕಾರಿಗಳು, ಸ್ಥಾನಿಕ ಜಾಗೃತದಳ ಅಧಿಕಾರಿಗಳು, ಸಹಾಯಕರು ಮತ್ತು ಡಿ ದರ್ಜೆ ಸಹಾಯಕರು ಸೇರಿಂತೆ ಒಟ್ಟು 477 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಮುಂಜಾಗೃತ ಕ್ರಮವಾಗಿ ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ಆರೋಗ್ಯ ಅಧಿಕಾರಿಗಳನ್ನು ಮತ್ತು ಸೂಕ್ತ ಬಂದೋಬಸ್ತಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲು ಸಂಬಂಧಿಸಲಾಗುತ್ತಿದೆ ಎಂದರು.
ಮಾ.21 ರಂದು ಪ್ರಥಮ ಭಾಷೆ (ಕನ್ನಡ), ಮಾ.24 ರಂದು ಗಣಿತ ವಿಷಯ, ಮಾ.26 ರಂದು ದ್ವಿತೀಯ ಭಾಷೆ (ಆಂಗ್ಲ ಭಾಷೆ), ಮಾ.29 ರಂದು ಸಮಾಜ ವಿಜ್ಞಾನ ವಿಷಯ, ಎ.2 ರಂದು ವಿಜ್ಞಾನ ವಿಷಯ ಮತ್ತು ಎ.4 ರಂದು ತೃತೀಯ ಭಾಷೆ (ಹಿಂದಿ) ಪರೀಕ್ಷೆಗಳು ನಡೆಯಲಿವೆ.
ವಿದ್ಯಾರ್ಥಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ಧೈರ್ಯವಾಗಿ ಪರೀಕ್ಷೆಗಳನ್ನು ಬರೆಯಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತಾಲೂಕಿಗೆ ಕೀರ್ತಿ ತರಬೇಕೆಂದು ಹಾರೈಸಿದರು.