ಬೆಂಗಳೂರು, ಏ.13, ಎಂಎಸ್ ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಏಪ್ರಿಲ್ 14 ರ ಬಳಿಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಇಂದು ಸಚಿವ ಸಂಪುಟದ ಸಹದ್ಯೋಗಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ ಹಣ 2834 ಕೋಟಿ ರೂ ಕೂಡಲೇ ಪಾವತಿಸಲು ಸೂಚಿಸಲಾಗಿದೆ. ಈ ಬಗ್ಗೆ ಗಮನ ಹರಿಸದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.ಇತ್ತೀಚೆಗೆ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ನಾಶವಾಗಿದೆ. ಈ ಭಾಗದ ರೈತರಿಗೆ ಪರಿಹಾರ ನೀಡಲು 45 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಕೊಪ್ಪಳ ರಾಯಚೂರು ಜಿಲ್ಲೆಯಲ್ಲಿ ಮಳೆಯಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಿದ್ದರು. ಕೃಷಿ ಸಚಿವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಈ ಭಾಗದ ಭತ್ತ ಹಾನಿ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ.ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವು ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ. ಸದ್ಯ ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ. ಇದನ್ನು ಮತ್ತೆ ಸುಸ್ಥಿತಿಗೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಬೇಕೆ ಬೇಡವೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಸಲಹೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಯಡಿಯೂರಪ್ಪ ತಿಳಿಸಿದರು.
ಲಾಕ್ ಡೌನ್ ಸಡಿಲಗೊಳಿಸುವ ಸಾಧ್ಯತೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳು ಬಂದವು. ಅವುಗಳನ್ನು ನಾವು ಜಾರಿಗೊಳಿಸಲು ತೀರ್ಮಾನಿಸಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.
ಉದಾಹರಣೆಗೆ ಅನಧಿಕೃತ ಕಟ್ಟಡಗಳ ಕುರಿತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರಯತ್ನಿಸುವಂತೆ ಸೂಚಿಸಲಾಯಿತು. ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥವಾದರೆ ನಾಗರಿಕರಿಗೂ ಅನುಕೂಲವಾಗಲಿದೆ. ರಾಜ್ಯಕ್ಕೂ ಸಂಪನ್ಮೂಲ ದೊರೆಯಲಿದೆ. ಇದರೊಂದಿಗೆ ಬಿಡಿಎ ವ್ಯಾಪ್ತಿಯಲ್ಲಿರುವ 12 ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕಲು ಚಿಂತನೆ ನಡೆಸಲಾಗುತ್ತಿದೆ. ಖಾಸಗಿ ಮತ್ತು ಸಹಕಾರಿ ಸಂಘಗಳ ಬಡಾವಣೆ ನಿರ್ಮಾಣ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅನುಮತಿಗೆ ಕಾಯುತ್ತಿರುವ ನೂರಾರು ವಸತಿ ನಿರ್ಮಾಣ ಸೊಸೈಟಿಗಳಿಗೆ ಅನುಮತಿ ನೀಡಲು ಸಾಧ್ಯವಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕೋವಿಡ್ 19 ರಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತವಾಗಿದೆ. ಇದನ್ನು ಸರಿದೂಗಿಸಲು ಹಲವು ಮಾರ್ಗೋಪಾಯಗಳನ್ನು ಕಂಡು ಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ 1000 ಕೋಟಿ ರೂಪಾಯಿಗಳನ್ನು ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಲಾಯಿತು. ಮುಂದಿನ ಒಂದು ವಾರಕ್ಕೆ ಉಚಿತ ಹಾಲು ವಿತರಣೆ ವಿಸ್ತರಿಸಲಾಗುವುದು. ರಾಜ್ಯದ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ ಮೂಲೆ ನಿವೇಶನಗಳು ಹಾಗೂ ಖಾಲಿ ಇರುವ ನಿವೇಶನಗಳನ್ನು ಹರಾಜು ಹಾಕಲು ಕ್ರಮ ವಹಿಸಲಾಗುವುದು. ಪ್ರಸ್ತುತ ಕೋವಿಡ್ 19ಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಡಿ ಪೋರ್ಟಲ್ ಗಳನ್ನು ನಿರ್ವಹಿಸಲಾಗುತ್ತಿದ್ದು, ಇವುಗಳನ್ನು ಏಕೀಕೃತ ಪೋರ್ಟಲ್ ವ್ಯವಸ್ಥೆಯಡಿ ತರಲು ತೀರ್ಮಾನಿಸಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.