ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯನ್ನು ಪ್ರೀತಿಯಿಂದ ಕಾಣಬೇಕು -ಸಿ ಆರ್ ಲಕ್ಕುಂಡಿಮಠ

ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯನ್ನು ಪ್ರೀತಿಯಿಂದ ಕಾಣಬೇಕು -ಸಿ ಆರ್ ಲಕ್ಕುಂಡಿಮಠ  All children should treat their parents with love – C.R. Lakkundimath

ಲಕ್ಷೇಶ್ವರ 26:  ಎಲ್ಲ ಮಕ್ಕಳು ತಮ್ಮನ್ನು ಹೆತ್ತ ತಂದೆ ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು ಅವರು ಪಟ್ಟ ಪರಿಶ್ರಮದಿಂದ ನೀವು ಉತ್ತಮ ನಾಗರಿಕರಾಗಿ ಬೆಳೆದಿದ್ದೀರಿ ನಿಮ್ಮ ಉತ್ತಮ ಬೆಳವಣಿಗೆಗಾಗಿ ಅವರು ತಮ್ಮ ಜೀವನವನ್ನೇ ಶ್ರಮಿಸಿದ್ದಾರೆ ಅವರನ್ನು ಪ್ರೀತಿಯಿಂದ ಕಾಣಿ ಎಂದು ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಅಧ್ಯಕ್ಷ ಸಿ ಆರ್ ಲಕ್ಕುಂಡಿ ಮಠ ಹೇಳಿದರು. ಅವರು ಪಟ್ಟಣದ ಬಾಳಿಕಾಯಿ ಅವರ ಜೀನಿನ ಆವರಣದಲ್ಲಿ ಗುರುವಾರ ಜರುಗಿದ ಸಂಘದ ಮಾಸಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ’ಸಂಘದಲ್ಲಿ ಈವರೆಗೆ ನೂರಾರು ಹಿರಿಯರು ಸದಸ್ಯತ್ವ, ಪಡೆದುಕೊಂಡಿದ್ದು ಅವರಿಗೆ ಸಂಘದ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳು ಅನುಷ್ಠಾನಕ್ಕೆ ಬರಲಿದ್ದು ಅವುಗಳ ಸೌಲಭ್ಯ ಪಡೆದುಕೊಳ್ಳಲು ಸಹಕಾರ ನೀಡಲಾಗುವುದು’ ಎಂದು ಹೇಳಿದ ಅವರು ’ಕಳೆದ ಮೂರು ತಿಂಗಳಿಂದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಬರಬೇಕಾದ ಪಿಂಚಣಿ ಹಣ ಬಂದಿಲ್ಲ. ಕಾರಣ ಹಣ ಬಾರದವರು ಸಂಘಕ್ಕೆ ಅರ್ಜಿ ಕೊಡಬೇಕು’ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸವದತ್ತಿ ಮಾತನಾಡಿ ’ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದನ್ನು ಯಾರೂ ಮರೆಯಬಾರದು, ಎಲ್ಲರೂ ಒಂದಾಗಿದ್ದರೆ, ಯಾವುದೇ ಕೆಲಸವನ್ನಾದರೂ ಸಾಧಿಸಲು ಸಾಧ್ಯ’ ಎಂದ ಅವರು ’ಸಂಘದ ಚಟುವಟಿಕೆಗಳನ್ನು ನಡೆಸಲು ಸ್ಥಳದ ಅಗತ್ಯ ಇದ್ದು ಪುರಸಭೆ ಸ್ಥಳವನ್ನು ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.

ನಿವೃತ್ತ ಉಪನ್ಯಾಸಕಿ ಸುವರ್ಣ ಹಿರೇಮಠ ಮಾತನಾಡಿ, ’ಹಿರಿಯ ನಾಗರಿಕರು ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದನ್ನು ಕಲಿಯಬೇಕು. ವಯಸ್ಸಾದ ಮೇಲೆ ಬೇರೆಯವರ ಆಶ್ರಯ ಬೇಕೇಬೇಕು ಎಂಬುದನ್ನು ಮರೆಯಬಾರದು’ ಎಂದರು.ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಅಳಗವಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಐ.ಎಸ್, ಮಡಿವಾಳರ, ನಿವೃತ್ತ ಶಿಕ್ಷಕ ಎಲ್‌.ಆರ್‌. ಮಲ್ಲಸಮುದ್ರ, ಪವಾಡಶೆಟ್ಟಿ, ಚನ್ನಪ್ಪ ಕೋಲಕಾರ, ವಾಲಿಶೆಟ್ಟರ, ಡಾ.ಎಸ್‌.ಜಿ. ಹೂವಿನ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಜೂನ್ ತಿಂಗಳಲ್ಲಿ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಹಿರಿಯರ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಲಾಗಿತ್ತು