ಜಾಟ್ ಪಟ್ಟಣದ ಹೆಸರು ‘ದೇವಭೂಮಿ ಜಾಟ್’ ಎಂದು ಬದಲಿಸುವ ಪ್ರಸ್ತಾವನೆಗೆ ಸರ್ವಪಕ್ಷಗಳ ವಿರೋಧ

ಜಾಟ್ ಪಟ್ಟಣದ ಹೆಸರು ‘ದೇವಭೂಮಿ ಜಾಟ್’ ಎಂದು ಬದಲಿಸುವ ಪ್ರಸ್ತಾವನೆಗೆ ಸರ್ವಪಕ್ಷಗಳ ವಿರೋಧ All-Party Rally in Jat Opposes Proposal to Rename Town ‘Devbhoomi Jat’

ಸಾಂಗ್ಲಿ, ಆ. 9: ಜಾಟ್ ಪಟ್ಟಣದ ಹೆಸರನ್ನು ‘ದೇವಭೂಮಿ ಜಾಟ್’ ಎಂದು ಬದಲಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಶನಿವಾರ ಸಾಂಗ್ಲಿ ಜಿಲ್ಲೆಯ ಜಾಟ್ ಪಟ್ಟಣದಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು.

ಜಾಟ್ ಪಟ್ಟಣದ ಹೆಸರನ್ನು ಬದಲಿಸುವ ಪ್ರಸ್ತಾವನೆಯನ್ನು ಬಿಜೆಪಿ ಶಾಸಕ ಗೋಪಿಚಂದ್ ಪಡಳ್ಕರ್ ಅವರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಪಟ್ಟಣದ ಐತಿಹಾಸಿಕ ಗುರುತನ್ನು ಉಳಿಸಿಕೊಳ್ಳಬೇಕು ಎಂದು ಜಾಟ್‌ನ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕರಾದ ವಿಲಾಸರಾವ್ ಜಗತಾಪ್ ಹಾಗೂ ವಿಕ್ರಮ್ ಸಾವಂತ್ ಅವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು. ನೂರಾರು ಸ್ಥಳೀಯರು ಕಪ್ಪುಪಟ್ಟಿ ಧರಿಸಿ ರ‍್ಯಾಲಿಯಲ್ಲಿ ಭಾಗವಹಿಸಿ, ಹೆಸರು ಬದಲಾವಣೆಯ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು.

ರ‍್ಯಾಲಿಯ ಬಳಿಕ ಪ್ರತಿಭಟನಾಕಾರರು ಧರಣಿ ನಡೆಸಿ, ಜಾಟ್ ಪಟ್ಟಣದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಭಾಗವಹಿಸಿರುವುದು, ಪಟ್ಟಣದ ಹೆಸರನ್ನು ಬದಲಿಸುವ ಪ್ರಸ್ತಾವನೆಗೆ ಸ್ಥಳೀಯರ ಒಂದು ವರ್ಗದಲ್ಲಿ ತೀವ್ರ ವಿರೋಧವಿದೆ ಎಂಬುದನ್ನು ತೋರಿಸಿತು.