‘ಜಿಲ್ಲಾಧಿಕಾರಿ ರೋಷನ್‌ಪರ ರಾಜ್ಯದ ಸಂಸದರೆಲ್ಲ ಧ್ವನಿ ಎತ್ತಬೇಕು’

‘ಜಿಲ್ಲಾಧಿಕಾರಿ ರೋಷನ್‌ಪರ ರಾಜ್ಯದ ಸಂಸದರೆಲ್ಲ ಧ್ವನಿ ಎತ್ತಬೇಕು’ All MPs of the state should raise their voices in favor of district magistrate Roshan


ಬೆಳಗಾವಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿರುವ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜಿಲ್ಲಾಡಳಿತ ಮತ್ತು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮಗಳು ಸಂಪೂರ್ಣ ಕಾನೂನುಬದ್ಧವಾಗಿವೆ ಎಂದು ಸಮರ್ಥಿಸಿಕೊಂಡರು. ಲೋಕಸಭೆ ಸ್ಪೀಕರ್ಗೆ ಸಂಸದ ಧೈರ್ಯಶೀಲ ಮಾನೆ ಅವರು ನೀಡಿರುವ ದೂರು ಕೇವಲ ರಾಜಕೀಯ ಪ್ರೇರಿತ. ಡಿಸಿಯವರು ಯಾವುದೇ ಹಕ್ಕುಚ್ಯುತಿ ಮಾಡಿಲ್ಲ. ವಿಷಯದಲ್ಲಿ ರಾಜ್ಯದ ಎಲ್ಲಾ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದರು

"ಇದುವರೆಗೆ ನಮಗೆ ಯಾವುದೇ ನೋಟಿಸ್ ಬಂದಿಲ್ಲ ಅಥವಾ ಸಮಿತಿ ರಚನೆಯಾಗಿಲ್ಲ. ನೋಟಿಸ್ ಬಂದ ನಂತರ ನಾವು ಕಾನೂನಾತ್ಮಕವಾಗಿ ಸೂಕ್ತ ಉತ್ತರ ನೀಡುತ್ತೇವೆ" ಎಂದು ಸಚಿವರು ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸದಿರುವುದಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯೆ ನೀಡಿ ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಕ್ಸೋ ಕೇಸ್ ದಾಖಲಿಸಲೇಬೇಕು. ಕುರಿತು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ವಿವರಣೆ ಕೇಳಿ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಶೀಘ್ರದಲ್ಲೇ ಬೆಳಗಾವಿ ಜಿಲ್ಲಾ ವಿಭಜನೆ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ, ಪಾಟೀಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ  ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಬೆಂಗಳೂರಿನಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದರು.