ದುಡಿಯುವ ಜನರ ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿಯಿಂದ ಅಖಿಲ ಭಾರತ ಪ್ರತಿಭಟನಾ ಸಪ್ತಾಹ
ಬಳ್ಳಾರಿ 16 : ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿ ಅಖಿಲ ಭಾರತ ಸಮಿತಿಯು ಫೆಬ್ರುವರಿ 11-17 ರವರೆಗೆ ದೇಶವ್ಯಾಪಿ ಪ್ರತಿಭಟನಾ ಸಪ್ತಾಹಕ್ಕೆ ಕರೆ ನೀಡಿದೆ. ಇತ್ತೀಚೆಗೆ ಭುವನೇಶ್ವರದಲ್ಲಿ ಅಖಿಲ ಭಾರತ ಸಮ್ಮೇಳನದಲ್ಲಿ ಕೈಗೊಳ್ಳಲಾದ ಬೇಡಿಕೆಗಳ ಪಟ್ಟಿಯ ಆಧಾರದ ಮೇಲೆ ಚಳುವಳಿಯನ್ನು ದೇಶದಾಯಂತ ಹರಿಬಿಡುವ ನಿಮಿತ್ಯ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಲು ಮನವಿ ಮಾಡುತ್ತೇವೆ.ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳನ್ನೇ ಬಹಳ ವೇಗವಾಗಿ ಜಾರಿಗೊಳಿಸುತ್ತಾ, ಅದರಲ್ಲೂ ದುಡಿಯುವವರ ಜೀವನವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿರುವುದು ಅತ್ಯಂತ ನೋವಿನ ವಿಚಾರ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವವರು ತೀವ್ರವಾದ ಭಾದೆಗೆ ತುತ್ತಾಗಿದ್ದಾರೆ. ತ್ಯಾಗ ಬಲಿದಾನಗಳಿಂದ ಗಳಿಸಿದ ಅವರ ಎಲ್ಲಾ ಹಕ್ಕುಗಳು ಇನ್ನಿಲ್ಲವಾಗುತ್ತಿದೆ. ಖಾಯಂ ಉದ್ಯೋಗಗಳು ತೀವ್ರವಾಗಿ ಕಡಿತವಾಗುತ್ತಿವೆ. ಹೊರ ಗುತ್ತಿಗೆ, ವಿವಿಧ ರೀತಿಯ ಗುತ್ತಿಗೆ ಕೆಲಸಗಳು, ನಿಗದಿತ ಅವಧಿಗೆ ಮಾತ್ರ ಉದ್ಯೋಗ, ಗೀಗ್ ಕೆಲಸ ಇತ್ಯಾದಿಗಳು ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಜನಹಿತಕ್ಕೆ ವಿರುದ್ಧವಾಗಿ ಖಾಸಗೀಕರಿಸಲಾಗುತ್ತಿದೆ. ದುಡಿಯುವ ಜನರ ವೇತನ ಜೀವನವೆಚ್ಚಕ್ಕೆ ಹೋಲಿಸಿದರೆ ಕ್ಷೀಣಿಸುತ್ತಿದೆ, ಸೇವಾಭದ್ರತೆ ಮಾಯವಾಗುತ್ತಿದೆ.
ಜನರ ಬೆವರು ರಕ್ತದಿಂದ ನಿರ್ಮಿಸಿದ್ದ ವಿವಿಧ ಸಾರ್ವಜನಿಕ ಕ್ಷೇತ್ರದ ಆಸ್ತಿಯನ್ನು ಯಾವುದೇ ಹೂಡಿಕೆ ಮಾಡದ ದೈತ್ಯ ಕಾರ್ೊರೇಟ್ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು, ರೈಲ್ವೆ ಹಳಿಗಳು-ನಿಲ್ದಾಣಗಳು ಹೀಗೆ ಎಲ್ಲವನ್ನೂ ಮಾಲೀಕರಿಗೆ ಒಪ್ಪಿಸಲಾಗುತ್ತಿದೆ. ಸರ್ಕಾರವು ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ಜಾರಿ ಮಾಡಿ ದೇಶದ ಅಪಾರ ಸಂಪತ್ತನ್ನು ಸೃಷ್ಟಿಸುವ ಬೃಹತ್ ಉದ್ದಿಮೆಗಳನ್ನು ಅತ್ಯಂತ ಕಡಿಮೆ ಆದಾಯಕ್ಕೆ ಖಾಸಗಿಯವರಿಗೆ ಒತ್ತೆ ಇಡಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್‌ಗಳನ್ನು ವೀಲೀನಗೊಳಿಸುತ್ತಾ, ಖಾಸಗೀಕರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐಋ, ಉಋ ಗಳನ್ನು ಖಾಸಗೀಕರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ರಕ್ಷಣಾ ಉಪಕರಣಗಳನ್ನು ತಯಾರಿಸುವ 41 ಸಶಸ್ತ್ರ ಕಾರ್ಖಾನೆಗಳನ್ನು ಖಾಸಗೀಕರಣ ಪೂರ್ವದ ಪ್ರಕ್ರಿಯೆಯಾಗಿ 7 ನಿಗಮಗಳಾಗಿ ಪರಿವರ್ತಿಸಿದೆ. ಇದು ಗಂಭೀರ ಸ್ವರೂಪದ ದೇಶ ವಿರೋಧಿ ನಡೆಯಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮರ್ಜಿಗೆ ಒಳಗಾಗಿ 12 ಗಂಟೆಗಳಿಗೆ ಹೆಚ್ಚಳ ಮಾಡಿವೆ. ಐಎಲ್‌ಓ 144 ನೇ ಸಮಾವೇಶದ ಪ್ರಕಾರ ಸರ್ಕಾರವು, ಕನಿಷ್ಟ ವರ್ಷಕ್ಕೆ ಒಂದು ಬಾರಿಯಾದರೂ ತ್ರಿಪಕ್ಷೀಯ (ಸರ್ಕಾರ-ಮಾಲೀಕ-ಕಾರ್ಮಿಕ) ಸಭೆಯನ್ನು ನಡೆಸಬೇಕಾಗಿತ್ತು. ಹಲವಾರು ಬಾರಿ ನೆನಪಿಸಿದರೂ ಈ ಸರ್ಕಾರ, ಇಂತಹ ಸಭೆಗಳನ್ನು 2015 ರಿಂದಲೂ ನಡೆಸೇ ಇಲ್ಲ. ಯಾವುದೇ ಚರ್ಚೆ, ಸಮಾಲೋಚನೆ ಇಲ್ಲದೇ ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ‘ಕಾರ್ಮಿಕ ಸಂಹಿತೆ’ ಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ದುಡಿಮೆಯ ಆರೋಗ್ಯ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವ ಬದಲಿಗೆ ಸರ್ಕಾರವು ಕೆಲಸದ ಸ್ಥಳಗಳನ್ನು ಪರೀಶೀಲಿಸುವ ಕಾರ್ಯದಿಂದ ದೂರ ಸರಿಯುತ್ತಿದೆ. ಹೊಸ ಪಿಂಚಣಿ ಯೋಜನೆ ವಿರೋಧಿಸಿ, ಹಳೇ ಪಿಂಚಣಿ ಯೋಜನೆ ಪುನರ್ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ.
ಇನ್ನು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು, ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರು ಇತ್ಯಾದಿ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ವರ್ಷಪೂರ್ತಿ ಕೆಲಸವಿಲ್ಲದೆ, ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಲಕ್ಷಾಂತರ ಮಹಿಳೆಯರೇ ಇರುವ ವಿವಿಧ ಯೋಜನೆಗಳಲ್ಲಿ ತೊಡಗಿರುವ ಸ್ಕೀಮ್ ಕಾರ್ಯಕರ್ತೆಯರನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷ ಮಾಡುತ್ತಿವೆ. ಪ್ರಸಕ್ತ ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಜನರ ಪಾಲಿಗೆ ಸ್ವಲ್ಪವಾದರೂ ನೆರವಾಗುತ್ತಿದ್ದ ನರೇಗಾ ಯೋಜನೆ, ಐಸಿಡಿಎಸ್, ಎನ್‌ಹೆಚ್‌ಎಂ, ಎಸ್‌ಎಸ್‌ಎ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸುತ್ತ ಯೋಜನೆಗಳನ್ನು, ಇದರಲ್ಲಿ ತೊಡಗಿರುವ ಲಕ್ಷಾಂತರ ಕಾರ್ಯಕರ್ತರನ್ನು ಸೊರಗಿಸುತ್ತಿದೆ. ಆದ್ದರಿಂದ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಐಯುಟಿಯುಸಿ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.