ಭಾರತದಲ್ಲಿ ವೈದ್ಯಕೀಯ ಲಾಜಿಸ್ಟಿಕ್ಸ್‌ಗಾಗಿ eVTOL ಬಳಕೆಯ ಸಾಧ್ಯತೆ ಪರಿಶೀಲಿಸಲು ಏರ್ ಇಂಡಿಯಾ, ಸ್ಕೈಡ್ರೈವ್ ಮತ್ತು ಸುಜುಕಿ ಒಪ್ಪಂದ

ಭಾರತದಲ್ಲಿ ವೈದ್ಯಕೀಯ ಲಾಜಿಸ್ಟಿಕ್ಸ್‌ಗಾಗಿ eVTOL ಬಳಕೆಯ ಸಾಧ್ಯತೆ ಪರಿಶೀಲಿಸಲು ಏರ್ ಇಂಡಿಯಾ, ಸ್ಕೈಡ್ರೈವ್ ಮತ್ತು ಸುಜುಕಿ ಒಪ್ಪಂದ Air India, SkyDrive and Suzuki Partner to Explore eVTOL-Based Medical Logistics in India

ಕೋಲ್ಕತ್ತಾ, ಜುಲೈ 31: ಭಾರತದಲ್ಲಿ ವೈದ್ಯಕೀಯ ವಾಯು ಲಾಜಿಸ್ಟಿಕ್ಸ್‌ಗಾಗಿ ವಿದ್ಯುತ್ ಚಾಲಿತ ಲಂಬ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳ ಬಳಕೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ಏರ್ ಇಂಡಿಯಾ, ಜಪಾನ್‌ನ eVTOL ವಿಮಾನ ತಯಾರಕ ಸ್ಕೈಡ್ರೈವ್ ಇಂಕ್. ಮತ್ತು ಸುಜುಕಿ ಮೋಟಾರ್ ಕಾರ್ಪೊರೇಷನ್ ಸಂಸ್ಥೆಗಳು ಒಪ್ಪಂದ (MoU) ಮಾಡಿಕೊಂಡಿವೆ.

ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯಿಂದ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಸಾಗಣೆಯಲ್ಲಿ ಉಂಟಾಗುವ ವಿಳಂಬವನ್ನು ಕಡಿಮೆ ಮಾಡುವ ಉದ್ದೇಶದಿಂದ eVTOL ವಿಮಾನಗಳ ಬಳಕೆಯ ಸಾಧ್ಯತೆಗಳನ್ನು ಈ ಸಹಯೋಗದಲ್ಲಿ ಪರಿಶೀಲಿಸಲಾಗುವುದು.

ಈ ಒಪ್ಪಂದದಡಿ ಸ್ಕೈಡ್ರೈವ್ ತನ್ನ eVTOL ತಂತ್ರಜ್ಞಾನ ಪರಿಣತಿಯನ್ನು ಒದಗಿಸಲಿದೆ. ಏರ್ ಇಂಡಿಯಾ ವಿಮಾನಯಾನ ಕಾರ್ಯಾಚರಣೆಗಳ ಅನುಭವ ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯದ ಜ್ಞಾನವನ್ನು ಹಂಚಿಕೊಳ್ಳಲಿದೆ. ಸುಜುಕಿ ಮೋಟಾರ್ ಕಾರ್ಪೊರೇಷನ್ ಭಾರತೀಯ ಮಾರುಕಟ್ಟೆಯ ಕುರಿತ ತನ್ನ ಅನುಭವದ ಆಧಾರದ ಮೇಲೆ ಪ್ರಸ್ತಾವಿತ ಸೇವೆಗಳ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲಿದೆ.

ಅತಿ ಮೌಲ್ಯದ ಮತ್ತು ತುರ್ತು ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳ ಸಾಗಣೆ ಸಮಯವನ್ನು ಕಡಿಮೆ ಮಾಡುವ ಮೂಲಕ ಕೊನೆಯ ಹಂತದ ವೈದ್ಯಕೀಯ ಲಾಜಿಸ್ಟಿಕ್ಸ್‌ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಭಾರತದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸಂಸ್ಥೆಗಳು ತಿಳಿಸಿವೆ.

ಏರ್ ಇಂಡಿಯಾದ ಕಾರ್ಗೋ ವಿಭಾಗದ ಮುಖ್ಯಸ್ಥ ರಮೇಶ್ ಮಾಮಿಡಾಲಾ ಮಾತನಾಡಿ, ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿ ಸುಧಾರಿತ ವಾಯು ಚಲನಶೀಲತೆ (Advanced Air Mobility) ಒಂದು ಸಹಜ ವಿಸ್ತರಣೆಯಾಗಿದೆ ಎಂದು ಹೇಳಿದರು. ನೈಜ ಸಮಸ್ಯೆಗಳಿಗೆ ಮುಂದಿನ ಪೀಳಿಗೆಯ ಸಾರಿಗೆ ಪರಿಹಾರಗಳನ್ನು ಅನ್ವೇಷಿಸುವ ಉದ್ದೇಶವನ್ನು ಈ ಸಹಯೋಗ ಪ್ರತಿಬಿಂಬಿಸುತ್ತದೆ ಎಂದರು.

"ವೈದ್ಯಕೀಯ ವಾಯು ಲಾಜಿಸ್ಟಿಕ್ಸ್‌ಗಾಗಿ eVTOL ವಿಮಾನಗಳ ಬಳಕೆಯ ಸಾಧ್ಯತೆ ಅತ್ಯಂತ ಮಹತ್ವದ್ದಾಗಿದೆ. ಇದು ತಂತ್ರಜ್ಞಾನ ಮತ್ತು ಮಾನವೀಯ ಉದ್ದೇಶವನ್ನು ಒಟ್ಟುಗೂಡಿಸಿ, ಪ್ರತಿಯೊಂದು ಕ್ಷಣವೂ ಮುಖ್ಯವಾಗಿರುವ ಸಂದರ್ಭಗಳಲ್ಲಿ ಸಾಗಣೆ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು," ಎಂದು ಮಾಮಿಡಾಲಾ ಹೇಳಿದರು.

ಸ್ಕೈಡ್ರೈವ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೊಮೊಹಿರೊ ಫುಕುಜಾವಾ ಮಾತನಾಡಿ, ಈ ಸಹಯೋಗವು ವೈಮಾನಿಕ ಚಲನಶೀಲತೆಯ ಮೂಲಕ ವೈದ್ಯಕೀಯ ಲಾಜಿಸ್ಟಿಕ್ಸ್ ಕ್ಷೇತ್ರವನ್ನು ಪರಿವರ್ತಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ನಗರ ಪ್ರದೇಶಗಳಲ್ಲಿ ಅತಿ ಮೌಲ್ಯದ ಮತ್ತು ತುರ್ತು ವೈದ್ಯಕೀಯ ಸಾಮಗ್ರಿಗಳ ಸಾಗಣೆಗೆ eVTOL ವಿಮಾನಗಳ ಬಳಕೆ ಆರೋಗ್ಯ ಸೇವೆಗಳನ್ನು ಸುಧಾರಿಸಲು ಮತ್ತು ಜೀವ ಉಳಿಸಲು ಸಹಕಾರಿಯಾಗಬಹುದು ಎಂದರು.

ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ನೆಕ್ಸ್ಟ್ ಜನರೇಷನ್ ಬಿಸಿನೆಸ್ ಡೆವಲಪ್‌ಮೆಂಟ್ ವಿಭಾಗದ ಕಾರ್ಯನಿರ್ವಾಹಕ ಪ್ರಧಾನ ವ್ಯವಸ್ಥಾಪಕ ಮಸಾವೊ ಫುಜಿತಾನಿ ಮಾತನಾಡಿ, ಸ್ಕೈಡ್ರೈವ್ ಅಭಿವೃದ್ಧಿಪಡಿಸುತ್ತಿರುವ eVTOL ವಿಮಾನಗಳು ನಗರ ವೈದ್ಯಕೀಯ ಮೂಲಸೌಕರ್ಯಕ್ಕೆ ನೆರವಾಗಬಲ್ಲ ಹೊಸ ರೀತಿಯ ಚಲನಶೀಲತೆಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು. ಜನರ ದೈನಂದಿನ ಅಗತ್ಯಗಳಿಗೆ ಸಂಬಂಧಿಸಿದ ಸಾರಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸುಜುಕಿ ತನ್ನ ಪಾಲುದಾರರೊಂದಿಗೆ ಮುಂದುವರಿಯಲಿದೆ ಎಂದರು.

ಕೋಲ್ಕತ್ತಾದ ರೂಬಿ ಕ್ರಾಸಿಂಗ್ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಈಗಾಗಲೇ ಹೆಲಿಪ್ಯಾಡ್ ಸೌಲಭ್ಯವಿದ್ದು, ಅದು ಏರ್ ಆಂಬುಲೆನ್ಸ್‌ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ತುರ್ತು ಆರೋಗ್ಯ ಸೇವೆಗಳಲ್ಲಿ ಆಧುನಿಕ ವೈಮಾನಿಕ ಸಾರಿಗೆ ಪರಿಹಾರಗಳನ್ನು ಅಳವಡಿಸುವ ಸಾಧ್ಯತೆಯನ್ನು ತೋರಿಸುತ್ತದೆ.