ಕೃಷಿ ನಮ್ಮ ಸಂಸ್ಕೃತಿ, ಮರೆತರೆ ವಿಕೃತಿ: ಶ್ರೀಗಳು

ಕೃಷಿ ನಮ್ಮ ಸಂಸ್ಕೃತಿ, ಮರೆತರೆ ವಿಕೃತಿ: ಶ್ರೀಗಳು Agriculture is our culture, if we forget it, it will be a perversion: Shri

      ಧಾರವಾಡ 04: ಕೃಷಿ ನಮ್ಮ ಸಂಸ್ಕೃತಿ. ಮರೆತರೆ ವಿಕೃತಿ. ಕೃಷಿಯು ಎಲ್ಲ ಸಂಸ್ಕೃತಿಗಳಿಗೂ ತಾಯಿ ಸ್ಥಾನದಲ್ಲಿದೆ. ಹಾಗಾಗಿ ಪಾರಂಪರಿಕ ಕೃಷಿ ಪದ್ಧತಿಯನ್ನು ರೈತರು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಮಠಾಧ್ಯಕ್ಷರಾದ ಮ.ನಿ.ಪ್ರ. ಶಿವಮಕುಮಾರ ಸ್ವಾಮಿಗಳು ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ “ಕೃಷಿ ಮತ್ತು ಪರಿಸರ ಮಂಟಪ”ವು ಆಯೋಜಿಸಿದ್ದ ತ್ರೈವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.  

ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಕೃಷಿ ಲಾಭದಾಯಕ ಮತ್ತು ಆಸಕ್ತಿದಾಯಕವಾಗಿತ್ತು. ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿ ಕೃಷಿ ಅವನತಿಯತ್ತ ಸಾಗುತ್ತಿದೆ. ಮಕ್ಕಳಿಗೆ ರೈತರು ಸಂಪತ್ತಿನ ಬೆನ್ನು ಹತ್ತದೆೆ  ಕೃಷಿ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವಂತೆ ಮಾಡಬೇಕಾಗಿದೆ. 50 ವರ್ಷಗಳಿಂದಿಚೆಗೆ ಕೃಷಿಯಲ್ಲಿ ನಾನಾ ಸಮಸ್ಯೆಗಳು ಉದ್ಭವವಾಗಿವೆ. ಮಣ್ಣಿನ ಸವೆತ, ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆ, ಹವಾಮಾನ ವೈಪರಿತ್ಯದಿಂದ ಕೃಷಿ ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ನಾವು ಸೇವಿಸುವ ಆಹಾರ ವಿಷಪೂರಿತವಾಗಿದೆ. ಮಣ್ಣು ರೈತನ ಕಣ್ಣು. ಹೊಲಗಳಿಗೆ ಹಾಕುವ ಒಡ್ಡು ರೈತನಿಗೆ ಬ್ಯಾಂಕ್ ಇದ್ದಂತೆ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಶಶಿಕಾಂತ ಉಡಿಕೇರಿ ಮಾತನಾಡಿ, ಕ.ವಿ.ವ. ಸಂಘವು ಹೊಸದಾಗಿ ಕೃಷಿ ಮತ್ತು ಪರಿಸರ ಮಂಟಪವನ್ನು ರಚಿಸಿ, ಸಂಘದ ಚಟುವಟಿಕೆಗಳನ್ನು  ವಿಸ್ತರಿಸಿದ್ದು ಶ್ಲಾಘನೀಯ. ಇಂದು ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿರುವುದರಿಂದ ಇಂದಿನ ಮಕ್ಕಳಿಗೆ ಕೃಷಿಯ ಪ್ರಾಯೋಗಿಕ ಜ್ಞಾನವನ್ನು ಉಂಟು ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ ಡಿ.ಟಿ. ಪಾಟೀಲ ಮಾತನಾಡಿ, ಕೃಷಿಕರಿಗೆ ಹಿಂದೆ ಇದ್ದ ನೆಮ್ಮದಿ ಇಂದು ಇಲ್ಲದಾಗಿದೆ. ಮನುಷ್ಯನು ತನ್ನ ದುರಾಸೆಯಿಂದ ಕೃಷಿ ಮತ್ತು ಪರಿಸರ ನಾಶವಾಗಿ ಮಣ್ಣು, ನೀರು ಮಾಲಿನ್ಯವಾಗುತ್ತಿದ್ದು ವಾಯು ಮಂಡಲದ ಶ್ವಾಸಕೋಶಗಳಂತಿರುವ ಶುದ್ಧ ಗಾಳಿಯು ಸಹ ಮಾಲಿನ್ಯವಾಗಿದೆ ಎಂದು ಹೇಳಿದರು.   ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ನೂತನವಾಗಿ ಕುಲಪತಿಗಳಾಗಿ ನೇಮಕಗೊಂಡ ಡಾ. ಶಶಿಕಾಂತ ಉಡಿಕೇರಿ ಅವರನ್ನು ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.  

ಅಶೋಕ ಕೋರಿ ಸ್ವಾಗತಿಸಿದರು. ಕೃಷಿ ಮತು ಪರಿಸರ ಮಂಟಪದ ಸಂಚಾಲಕ ಗುರು ಹಿರೇಮಠ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸುಮುಖ ಹುನಗುಂದ ನಿರೂಪಿಸಿದರು. ನಾಗರಾಜ ಹಂಗಳಕಿ  ವಂದಿಸಿದರು.  

ಕಾರ್ಯಕ್ರಮದಲ್ಲಿ ಚಂದ್ರಕಾಂತ ಬೆಲ್ಲದ, ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಕೆ.ಎಚ್‌. ನಾಯಕ, ಎಂ.ಎಂ. ಚಿಕ್ಕಮಠ, ಸೇತುರಾಮ ಹುನಗುಂದ, ಸುಜಾತಾ ಹಡಗಲಿ, ಪ್ರಭಾವತಿ ದೇಸಾಯಿ, ಡಾ. ಸುಧಾ.ಟಿ, ಮಂಗಳಗೌರಿ ಹಿರೇಮಠ, ಆರ್‌.ಜಿ. ತಿಮ್ಮಾಪೂರ, ಫಕ್ಕೀರ​‍್ಪ ಮುರಕಟ್ಟಿ, ಚಂದ್ರಶೇಖರ ಮಹಾಜನಶೆಟ್ಟರ, ಡಾ. ಚನ್ನಪ್ಪ ಅಂಗಡಿ, ಮಹೇಶ ಹುಲ್ಲಣ್ಣವರ ಸೇರಿದಂತೆ ಮುಂತಾದವರಿದ್ದರು.