ಜೆರುಸಲೆಮ್, ಡಿ 8: ಮೂರು ರಾಕೆಟ್ ದಾಳಿ ನಡೆದ ಬಳಿಕ ಇಸ್ರೇಲ್ ಮಿಲಿಟರಿ ಭಾನುವಾರ ಗಾಜಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ. ರಾತ್ರಿಯಿಡೀ ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಇಸ್ಲಾಮಿಕ್ ಹಮಾಸ್ ಚಳವಳಿಗೆ ಸೇರಿದ ಹಲವು ತಾಣಗಳ ಮೇಲೆ ದಾಳಿ ನಡೆಸಿವೆ ಎಂದು ಮಿಲಿಟರಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಗಾಜಾ ಪ್ರದೇಶದ ಹಮಾಸ್ ನೌಕಾಪಡೆಗೆ ಸೇರಿದ ಮಿಲಿಟರಿ ಕೇಂದ್ರವನ್ನು ಸಹ ನಾಶಪಡಿಸಲಾಗಿದೆ ಎಂದು ಸೇನೆಯು ತಿಳಿಸಿದೆ. ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ. ದಕ್ಷಿಣ ಇಸ್ರೇಲ್ ಕಡೆಗೆ ಶನಿವಾರ ರಾತ್ರಿ ನಡೆಸಿದ ಮೂರು ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ. ಎಲ್ಲಾ ಮೂರು ಸ್ಫೋಟಕಗಳನ್ನು ಇಸ್ರೇಲ್ನ ಐರನ್ ಡೋಮ್ ಆಂಟಿ ರಾಕೆಟ್ ವ್ಯವಸ್ಥೆಯಿಂದ ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಯಾವುದೇ ಸಂಘಟನೆಯು ರಾಕೆಟ್ ದಾಳಿಯ ಹೊಣೆಯನ್ನು ತಕ್ಷಣಕ್ಕೆ ವಹಿಸಿಕೊಂಡಿಲ್ಲ. ಆದರೆ ಈ ದಾಳಿಗೆ ಗಾಜಾ ಪ್ರದೇಶದಿಂದ ದಾಳಿ ನಡೆದರೆ ಅದಕ್ಕೆ ಹಮಾಸ್ ಕಾರಣ ಎಂದು ಹೇಳಿದೆ. ವಾಯುದಾಳಿಯನ್ನು ಖಂಡಿಸಿರುವ ಹಮಾಸ್, "ಗಾಜಾದಲ್ಲಿ ಪರಿಸ್ಥಿತಿ ಉಲ್ಬಣ ಮುಂದುವರೆಸುವ ಇಸ್ರೇಲಿ ಪ್ರಯತ್ನ" ಎಂದು ಆರೋಪಿಸಿದೆ. ದಾಳಿಯ ಪರಿಣಾಮಗಳನ್ನು ಇಸ್ರೇಲ್ ಹೊರಬೇಕು ಎಂದು ಅದು ಎಚ್ಚರಿಸಿದೆ.