ಡಾ.ಬಿ.ಆರ್‌. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ ಅಳವಡಿಸಿಕೊಳ್ಳಿ

ಡಾ.ಬಿ.ಆರ್‌. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ ಅಳವಡಿಸಿಕೊಳ್ಳಿ Adopt the principles and principles of Dr. B.R. Ambedkar.

ಲೋಕದರ್ಶನ ವರದಿ

     ಬಳ್ಳಾರಿ 12:  ಡಾ.ಬಿ.ಆರ್‌.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಂಡಿಹಟ್ಟಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಹೆಚ್‌.ಏಸಯ್ಯ ಅವರು ಹೇಳಿದರು. 

ನಗರದ ಕೋಟೆ ಪ್ರದೇಶದ ಶ್ರೀ ಮೇಧಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮೈ ಭಾರತ್ (ಮೇರಾ ಯುವ ಭಾರತ್) ಹಾಗೂ ಚಿಗುರು ಕಲಾತಂಡ ಇಬ್ರಾಹಿಂಪುರ ಇವರ ಸಂಯುಕ್ರಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಅಂಬೇಡ್ಕರ್ ಅವರು ಜೀವನದಲ್ಲಿ ಎದುರಿಸಿದ ಕಠಿಣ ಸವಾಲುಗಳು ಮತ್ತು ದುಃಖದ ಘಟನೆಗಳನ್ನು ನಾವೆಲ್ಲರೂ ಇಂದು ಸ್ಮರಿಸಬೇಕಾಗಿದೆ ಎಂದರು. ಇದೇ ವೇಳೆ ಭಾರತದ ಸಂವಿಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ  ಮತದಾನ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು. 

ಕಾಲೇಜಿನ ಪ್ರಾಂಶುಪಾಲ ಡಾ.ರಾಮ್ ಕಿರಣ್‌.ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ಮಾನವನೂ ಸಮಾನವಾಗಿ ಬಾಳುವ ಹಕ್ಕನ್ನು ನೀಡಿದ್ದಾರೆ. ನಾವೆಲ್ಲರೂ ಪರಸ್ಪರ ಪ್ರೀತಿ ಮತ್ತು ಮಾನವೀಯತೆಯಿಂದ ಬದುಕಬೇಕು. ವಿದ್ಯಾರ್ಥಿಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.