ಕೃಷಿಯಲ್ಲಿ ಸ್ಥಳೀಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಮಹೆಂದ್ರಕರ್

ಕೃಷಿಯಲ್ಲಿ ಸ್ಥಳೀಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಮಹೆಂದ್ರಕರ್ Adopt local farming practices in agriculture: Mahendrakar

ಶಿಗ್ಗಾವಿ 23: ರೈತರು ಸ್ಥಳೀಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕುಂದಗೋಳ ತಾಲೂಕಿನ ಕೃಷಿ ಅಧಿಕಾರಿ ಅಂಬಿಕಾ ಮಹೆಂದ್ರಕರ್ ಹೇಳಿದರು. 

ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಹಜ ಸಮೃದ್ಧ, ಎಲ್‌ಡಿಸಿ ಹಾಗೂ ದೇವಧಾನ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರೈತರಿಗಾಗಿ “ಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಂದಗೋಳ ಭಾಗದಲ್ಲಿ ಈ ವರ್ಷ ಹತ್ತಿ ಬೆಳೆದ ಪ್ರದೇಶವು 50ಅ ಕಡಿಮೆಯಾಗಿದೆ, ಹತ್ತಿ ಬೆಳೆಯಲ್ಲಿ ಕೀಟ ಹತೋಟಿಗೆ 10 ಸಾಲಿಗೆ ಒಂದು ಸಾಲು ಬೆಂಡೆ ಬೆಳೆಸುವುದರಿಂದ ನಿಯಂತ್ರಣ ಸಾಧ್ಯವೆಂದ ಅವರು, ಕುಂದಗೋಳ ತಾಲೂಕಿನ ಮಳಲಿ, ರಾಮಾಪುರ ಹಾಗೂ ವಿವಿಧ ಗ್ರಾಮಗಳ 125 ನೈಸರ್ಗಿಕ ಕೃಷಿ ರೈತರನ್ನು ಗುರುತಿಸಲಾಗಿದ್ದು, ಅವರೊಂದಿಗೆ ಈಗಾಗಲೇ ಚಟುವಟಿಕೆಗಳು ಆರಂಭವಾಗಿವೆ ಎಂದರು. 

ಎಲ್‌ಡಿಸಿ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಗೀರೀಶ್ ಮಾತನಾಡಿ, ಸಂಸ್ಥೆಯು ಕೀಟ ಮತ್ತು ರೋಗ ನಿಯಂತ್ರಣಕ್ಕೆ ಮೋಹಕ ಬಲೆಗಳನ್ನು ವಿತರಿಸುತ್ತಿದ್ದು, ಅವುಗಳಿಂದ ರೈತರಿಗೆ ಆಗುವ ಲಾಭಗಳನ್ನು ವಿವರಿಸಿ, ಒಂದು ಎಕರೆಗೆ ನಾಲ್ಕು ಮೋಹಕ ಬಲೆಗಳನ್ನು ಅಳವಡಿಸಿದರೆ ಕೀಟ ಹತೋಟಿ ಸಾಧ್ಯವಾಗುತ್ತದೆ. ಬೆಳೆಗಿಂತ ಒಂದು ಹಡಿ ಎತ್ತರದಲ್ಲಿ ಬಲೆಗಳನ್ನು ಅಳವಡಿಸಿ, ಸ್ವಚ್ಛವಾಗಿ ಇಟ್ಟುಕೊಂಡು ಬಳಸಬೇಕೆಂದರು.  

ಉದ್ಘಾಟಿಸಿದ ರೊಟ್ಟಿ ಅವರು ವೈವಿಧ್ಯಮಯ ದೇಸಿ ಹತ್ತಿ ತಳಿಗಳ ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ನೈಸರ್ಗಿಕ ಕೃಷಿಯಲ್ಲಿ ಹುಳುಗಳು ಮತ್ತು ಕೀಟಗಳ ಹತೋಟಿ ಕ್ರಮವನ್ನು ರೈತರಿಗೆ ಅಕ್ಕಡಿ ಪದ್ಧತಿ, ಸಾಲು ಬೆಳೆ ಪದ್ಧತಿ ಹಾಗೂ ನೆಲದ ಪಲವತ್ತತೆಯನ್ನು ಹೆಚ್ಚಿಸಲು ಘನ ಜೀವಾಮೃತ ಬಳಸಿ ಸಾಧಿಸಿದ ಯಶಸ್ಸಿನ ಅನುಭವವನ್ನು ಹಂಚಿಕೊಂಡರು. 

ಸಹಜ ಸಮೃದ್ಧ ಸಂಸ್ಥೆಯ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಲ್‌ಡಿಸಿ ಸಂಸ್ಥೆಯ ಸುಸ್ಥಿರ ಕೃಷಿ ಮುಖ್ಯಸ್ಥ ಅರುಣ್ ಕುಮಾರ್, ಬೇಯರ್ ಕ್ರಾಪ್ ಸೈನ್ಸ್‌ನ ಮುಖ್ಯಸ್ಥ ಶಂಭಣ್ಣ ಹಾದಿಮನಿ, ಹಿರೇಗುಂಜಾಳ ಗ್ರಾಮದ ರೈತ ಮಲ್ಲೇಶಪ್ಪ ಬಿ ಸಿ, ನೀರಲಗಿ ಗ್ರಾಪಂ ಅಧ್ಯಕ್ಷೆ ಜರೀನಾ ಬಾನು ಹುಲಗೂರು, ತಿಮ್ಮಾಪುರ ಮಹಿಳಾ ಸಂಘದ ಮುಖ್ಯಸ್ಥೆ ಪ್ರೇಮ ಲೋಕ್ಕೊಂಡೆ ಮಾತನಾಡಿದರು, ಕಾರ್ಯಕ್ರಮದಲ್ಲಿ ನಿರಲಗಿ, ತಿಮ್ಮಾಪುರ, ಮಳಲಿ, ಕುಂಕೂರು, ಗುರುವಿನಹಳ್ಳಿ, ತೀರ್ಥ ಗ್ರಾಮದ ಸುಮಾರು 200 ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.