ಐಐಟಿ ಕಾನ್ಪುರಕ್ಕೆ ಅದಿತಿ ಸವಣೂರ ಆಯ್ಕೆ

ಐಐಟಿ ಕಾನ್ಪುರಕ್ಕೆ ಅದಿತಿ ಸವಣೂರ ಆಯ್ಕೆ Aditi Savanur selected for IIT Kanpur

ಲೋಕದರ್ಶನ ವರದಿ 

ಮುದ್ದೇಬಿಹಾಳ  16 : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿನಿ ಅದಿತಿ ನೀಲಕಂಠಪ್ಪ ಸವಣೂರ (ಗಜೆಂದ್ರಗಡ) ಅವರು ದೇಶದ ಪ್ರತಿಷ್ಠಿತ ಐಐಟಿ ಕಾನ್ಪುರಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬರು ದೇಶದ ಉನ್ನತ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಅದಿತಿ ಅವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಸ್ಥೆಯು ಪ್ರತಿ ವರ್ಷ ರೂ 1,00,000 ವಿದ್ಯಾರ್ಥಿ ವೇತನ ಘೋಷಿಸಿದ್ದು, ಜೊತೆಗೆ ರೂ 50,000 ನಗದು ಪುರಸ್ಕಾರ ನೀಡಿ ಗೌರವಿಸಿದೆ.

ಈ ಕುರಿತು ಮಾತನಾಡಿದ ಸಂಸ್ಥೆಯ ಆಡಳಿತ ಅಧಿಕಾರಿ ಅಮಿತಗೌಡ ಪಾಟೀಲ್, "ನಮ್ಮ ಸಂಸ್ಥೆ ನಡೆಸುವ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿನಿಯೊಬ್ಬರು ಐಐಟಿ ಕಾನ್ಪುರಕ್ಕೆ ಆಯ್ಕೆಯಾಗಿರುವುದು  ನಮಗೆ ಅಪಾರ ಸಂತಸ ತಂದಿದೆ. ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ನೀಡುವ ನಮ್ಮ ಪ್ರಯತ್ನಕ್ಕೆ ಇದು ಸಾರ್ಥಕತೆ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳೆಸಲು ಹೆಚ್ಚಿನ ಹುಮ್ಮಸ್ಸು ನೀಡಿದೆ," ಎಂದು ಹೇಳಿದರು.ವಿದ್ಯಾರ್ಥಿನಿ ಅದಿತಿ ಸವಣೂರ ಅವರ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದು, ಶ್ರಮ, ಪ್ರತಿಭೆ ಹಾಗೂ ಸೂಕ್ತ ಮಾರ್ಗದರ್ಶನ ಇದ್ದರೆ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವುದು ಸಾಧ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.