ಬೆಂಗಳೂರು, ಜ. 21, ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಇತ್ತೀಚೆಗೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿಕಾ ಕುಟುಂಬ ಇಂದು ವಿಚಾರಣೆಗೆ ಹಾಜರಾಗಲಿದೆ. ಇದೇ ತಿಂಗಳ 16ರಂದು 10 ಜನರ ಐಟಿ ಅಧಿಕಾರಿಗಳ ತಂಡ ಕೊಡಗಿನ ವಿರಾಜಪೇಟೆ ಸೇರಿ ರಶ್ಮಿಕಾ ಅವರಿಗೆ ಸೇರಿದ ಎರಡು ಕಡೆ ದಾಳಿ ನಡೆಸಿತ್ತು. ಸುಮಾರು ಎರಡು ದಿನ ರಶ್ಮಿಕಾ ನಿವಾಸದ ಮೇಲೆ ದಾಳಿ ನಡೆಸಿದ ತಂಡ ಕೆಲ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ರಶ್ಮಿಕಾ ಹಾಗೂ ಕುಟುಂಬದವರು ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 11:30ಕ್ಕೆ ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ರಶ್ಮಿಕಾ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ಈಗಾಗಲೇ ಮೈಸೂರಿಗೆ ತೆರಳಿದ್ದು, ನಟಿ ರಶ್ಮಿಕಾ ಹೈದ್ರಾಬಾದ್ನಿಂದ ಬಂದು ವಿಚಾರಣಾ ಸಮಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.