ಹಾವೇರಿಯಲ್ಲಿ ನಟ ಚೇತನ್ ಅಹಿಂಸಾಗೆ ಸನ್ಮಾನ

ಹಾವೇರಿಯಲ್ಲಿ ನಟ ಚೇತನ್ ಅಹಿಂಸಾಗೆ ಸನ್ಮಾನ  Actor Chetan Ahimsa felicitated in Haveri

ಲೋಕದರ್ಶನ ವರದಿ 

ಹಾವೇರಿ, ಜು.10: ನಗರದ ಪ್ರವಾಸ ಮಂದಿರಕ್ಕೆ ಆಗಮಿಸಿದ್ದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ನೇತೃತ್ವದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಚೇತನ್ ಅಹಿಂಸಾ, ಡಾ. ಬಿ.ಆರ್‌. ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು. ಸರ್ಕಾರಗಳು ಬಡವರು, ಹಿಂದುಳಿದವರು ಹಾಗೂ ಧ್ವನಿಯಿಲ್ಲದವರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.  

ರಾಜ್ಯದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಪರ್ಯಾಯದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಹಾವೇರಿ ಜಿಲ್ಲೆಯ ಜನರು ನೀಡುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ, ಚೇತನ್ ಅಹಿಂಸಾ ಅವರು ಬಡವರು, ಶೋಷಿತರು ಹಾಗೂ ಧ್ವನಿಯಿಲ್ಲದವರ ಪರವಾಗಿ ನಿರಂತರವಾಗಿ ಸಾಮಾಜಿಕ ಹೋರಾಟ ನಡೆಸುತ್ತಿದ್ದು, ಅವರ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಂಜಪ್ಪ ಮರೋಳ, ಸುಭಾಷ್ ಚವ್ಹಾಣ್, ಶೆಟ್ಟಿ ವಿಭೂತಿ, ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಮಾಳಗಿ, ಮಲ್ಲೇಶಪ್ಪ ಹಂಚಿನಮನಿ, ಶಾರದಾ ದೊಡ್ಡಮನಿ, ಜಗದೀಶ್ ಹರಿಜನ, ಮಂಜುಳಾ ಅಕ್ಕಿ, ಗುಡ್ಡಪ್ಪ ಬಣಕಾರ, ಸುರೇಶ್ ಅಳ್ಳಳ್ಳಿ, ಅಜ್ಜಪ್ಪ ಹರಿಜನ, ದುರಗಪ್ಪ ಮಾದರ ಹಾಗೂ ಸುನೀಲ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.