ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ವಿರುದ್ಧ ಕ್ರಮ: ಸಚಿವ ಕೆ. ಜೆ. ಜಾರ್ಜ್‌

ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ವಿರುದ್ಧ ಕ್ರಮ: ಸಚಿವ ಕೆ. ಜೆ. ಜಾರ್ಜ್‌ Action against electricity theft and misuse: Minister K. J. George

ಬೆಳಗಾವಿ ಸುವರ್ಣ ವಿಧಾನಸೌಧ ಡಿ.16: ರಾಜ್ಯದಲ್ಲಿ ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಜಾಗೃತದಳ (ವಿಜಿಲೆನ್ಸ್‌) ಘಟಕವನ್ನು ಪೊಲೀಸ್ ಅಧೀಕ್ಷಕರು/ಪೊಲೀಸ್ ಉಪ ಅಧೀಕ್ಷಕರು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರ ನೇತೃತ್ವದಲ್ಲಿ ರಚಿಸಲಾಗಿದೆ ಹಾಗೂ ಪ್ರತಿ ಜಿಲ್ಲಾಮಟ್ಟದಲ್ಲಿ ಜಾಗೃತದಳ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌/ ಸಬ್‌-ಇನ್ಸ್‌ಪೆಕ್ಟರ್‌ರೊಂದಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಾಗೃತದಳವು ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್‌ ತಿಳಿಸಿದರು. 

ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಸೂರಜ್ ರೇವಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.ಜಾಗೃತದಳವು ನಿಯಮಿತವಾಗಿ ಕಾಲ-ಕಾಲಕ್ಕೆ ತಪಾಸಣೆ/ಅನೀರೀಕ್ಷಿತ ದಾಳಿ ನಡೆಸುವ ಮೂಲಕ ವಿದ್ಯುತ್ ಕಳ್ಳತನ/ವಿದ್ಯುತ್ ದುರ್ಬಳಕೆ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ವಹಿಸುತ್ತಿದ್ದು, ವಿದ್ಯುತ್ ಕಳ್ಳತನ ಕಂಡುಬಂದ ತಕ್ಷಣ ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿಗಳ ಮೂಲಕ ವಿದ್ಯುತ್ ನಿಲುಗಡೆಗೊಳಿಸಿ ನಿಯಮಾನುಸಾರ ಪ್ರಕರಣವನ್ನು ದಾಖಲಿಸುತ್ತಿದೆ. ಅಲ್ಲದೆ ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ವಿಶೇಷ ದಾಳಿದಳಗಳನ್ನು ಸಹ ರಚಿಸಿ ಸಾಮೂಹಿಕ ತಪಾಸಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಳ್ಳತನ/ದುರ್ಬಳಕೆ ಕಂಡುಬಂದರೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.ಭಾರತೀಯ ವಿದ್ಯುಚ್ಛಕ್ತಿ ಕಾಯಿದೆ 2003 ರ ಸೆಕ್ಷನ್ 126 ಮತ್ತು 135 ರ ಅಡಿಯಲ್ಲಿ ಕ್ರಮವಾಗಿ ಅಸಂಜ್ಞೆಯ(Non Cognizableಹಾಗೂ ಸಂಜ್ಞೆಯ (Cognizableಪ್ರಕರಣಗಳನ್ನು ಜಾಗೃತದಳ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿ, ತನಿಖೆ ನಡೆಸಿ, ಕೆ.ಇ.ಆರ್‌.ಸಿ. ಸೂಚಿಸಿರುವ ವಿದ್ಯುತ್ ಸರಬರಾಜು ನಿಬಂಧನೆಗಳ ಪ್ರಕಾರ ದಂಡ ವಿಧಿಸಲಾಗುತ್ತಿದೆ.ಸೆಕ್ಷನ್ 135 ಅಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ತಿಳಿಸಿದರು.