ಪಡಿತರ ನೀಡಲು ನಿರಾಕರಿಸಿದರೆ ವಿತರಕರ ಮೇಲೆ ಕ್ರಮ: ಸಚಿವ ಗೋಪಾಲಯ್ಯ

ಬೆಂಗಳೂರು, ಏ.10,ಲಾಕ್‌ಡೌನ್‌ ಸಂದರ್ಭದಲ್ಲಿ ಯಾರೊಬ್ಬರೂ ಹಸಿರು ಇರಬಾರದು ಎಂಬುದು ಸರ್ಕಾರದ ಸಂಕಲ್ಪವಾಗಿದ್ದು, ಆದ್ದರಿಂದ ಎರಡು ತಿಂಗಳ ಪಡಿತರವನ್ನು ಒಮ್ಮೆಲೆ ಕೊಡಲಾಗುತ್ತಿದೆ. ಆದ್ದರಿಂದ ಪಡಿತರ ವಿತರಕರು ತೂಕದಲ್ಲಿ ಮೋಸ ಮಾಡುವುದಾಗಲೀ, ಹಣ ಪಡೆಯುವುದಾಗಲಿ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.ಇಂದು ನಗರದ ಹಲವೆಡೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಬೆಳಗ್ಗೆ 8 ಗಂಟೆಯಿಂದ ನಗರದ ಹಲವೆಡೆ ಸುಮಾರು 15 ಪಡಿತರ ವಿತರಿಸುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸರ್ಕಾರ ಕೊಟ್ಟಿರುವ ಪಡಿತರವನ್ನು ಯಾವ ರೀತಿ ವಿತರಿಸಲಾಗುತ್ತಿದೆ ಎಂಬುದನ್ನು ವೀಕ್ಷಿಸಿದ್ದೇನೆ. ಆಯುಕ್ತರು, ಅಧಿಕಾರಿಗಳು, ಶಾಸಕರು ಕೂಡ ಬಂದಿದ್ದಾರೆ. ಈ ಅನಿರೀಕ್ಷಿತ ಭೇಟಿ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ ಎಂದು ತಿಳಿಸಿದರು.
ಕೊರೋನಾ ಸೋಂಕಿನಿಂದಾಗಿ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಇದರಿಂದ ರಾಜ್ಯ ಸಂಕಷ್ಟದಲ್ಲಿದೆ. ಇದಕ್ಕಾಗಿ ಸರ್ಕಾರ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಕೊಡುತ್ತಿದೆ. ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಹಾಗೂ ಕುಟುಂಬಕ್ಕೆ ತಲಾ 4 ಕೆ.ಜಿ.ಗೋದಿ ವಿತರಿಸಲಾಗುತ್ತಿದೆ. ಆದ್ದರಿಂದ ವಿತರಕರು ಗ್ರಾಹಕರಿಗೆ ಮೋಸ ಮಾಡಬಾರದು. ಈ ಸಂದರ್ಭದಲ್ಲಿ ಮಾನವೀಯತೆ ಮೆರೆಯಿರಿ ಎಂದು ಮನವಿ ಮಾಡಿದರು.ಕೇಂದ್ರ ಸರ್ಕಾರ ಘೋಷಿಸಿರುವ ಪಡಿತರ ಈ ತಿಂಗಳಾಂತ್ಯದ ವೇಳೆ ದೊರೆಯಲಿದೆ. ರಾಜ್ಯದ ಪಡಿತರವನ್ನು ವಿತರಿಸಿದ ಕೂಡಲೇ ಕೇಂದ್ರದ ಪಡಿತರ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಮತ್ತು ಬೇಳೆ ವಿತರಣೆಯನ್ನು ಈ ತಿಂಗಳ 25ರ ನಂತರ ಆರಂಭಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಡಿತರ ಸಿಗದೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಯಾರೆಲ್ಲಾ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ್ದಾರೋ ಅವರಿಗೂ ಪಡಿತರ ವಿತರಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.  ಹೊಸದಾಗಿ ಅರ್ಜಿ ಹಾಕಿರುವ 1.89 ಲಕ್ಷ  ಅರ್ಜಿದಾರರಿಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ರಾಜ್ಯದ ಯಾವುದೇ ತಾಲೂಕು, ಜಿಲ್ಲೆ ಅಥವಾ ಹೊರ ರಾಜ್ಯದಿಂದ ಬಂದಿದ್ದರೂ ಅವರಿಗೆ ಆಹಾರ ಧಾನ್ಯ ವಿತರಿಸಬೇಕು. ಬೇರೆ ಜಿಲ್ಲೆಯಿಂದ ಬಂದವರಿಗೆ ಒಟಿಸಿ ನೀಡಬೇಕು ಎಂಬ ನಿಯಮವಿದೆ. ಆದರೆ ಅದು ಕೂಡ ಇಲ್ಲದಿದ್ದರೆ ಮ್ಯಾನುವೆಲ್‌ ಆಗಿ ಪಡಿತರ ವಿತರಿಸಬೇಕು. ಯಾರಿಗೂ ಪಡಿತರ ಇಲ್ಲ ಎಂದು ಹಿಂದೆ ಕಳುಹಿಸಬಾರದು. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.ಒಂದು ವೇಳೆ ಪಡಿತರ ನೀಡಲು ನಿರಾಕರಿಸಿದರೆ ಅಂತಹ ವಿತರಕರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಗೋಪಾಲಯ್ಯ ಎಚ್ಚರಿಸಿದರು.