70ನೇ ರಾಜ್ಯೋತ್ಸವದ ಅಂಗವಾಗಿ ಸಾಧಕರ ಸನ್ಮಾನ

70ನೇ ರಾಜ್ಯೋತ್ಸವದ ಅಂಗವಾಗಿ  ಸಾಧಕರ ಸನ್ಮಾನ  Achievements felicitated as part of the 70th Rajyotsava


ಧಾರವಾಡ  07: ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡು ಬಂದಿರುವುದು ನಮ್ಮ ಹೆಮ್ಮೆ. ಶಾಸನಗಳಲ್ಲೂ ಕನ್ನಡದ ಅಂಕಿಗಳ ಬಳಕೆ ಇದ್ದದ್ದು ಕಂಡು ಬರುತ್ತದೆ. ಆ ದೆಸೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು 136 ವರ್ಷಗಳಿಂದ ಆಡಳಿತ ವ್ಯವಹಾರಗಳಲ್ಲಿ ಕನ್ನಡ ಅಂಕಿಗಳನ್ನೇ ಬಳಸುತ್ತಾ ಜನರಲ್ಲಿ ಕನ್ನಡದ ಅರಿವು ಮೂಡಿಸುತ್ತಿರುವುದು ಅಭಿನಂದನೀಯ ಎಂದು ಸಾಲಹಳ್ಳಿ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು. 

ಅವರು ದಿ: 06-11-2025 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. 

ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮವಾಗಬೇಕು. ನಾನು ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿ 30 ವರ್ಷ ಶಿಕ್ಷಣ ಇಲಾಖೆಯಲ್ಲಿ ಸೇವೆ  ಸಲ್ಲಿಸಿದ್ದು ಮಕ್ಕಳಿಗೆ ಕನ್ನಡ ಅಂಕಿಗಳನ್ನೇ ಬರೆಯುವುದನ್ನೂ ರೂಢಿಸಿದ್ದೇನೆ. ಜೊತೆಗೆ ಕೃಷಿ, ತೋಟಗಾರಿಕೆ ಹಾಗೂ ಪರಿಸರದ ಮೂಲ ಜ್ಞಾನ ಉಂಟಾಗುವಂತೆ ಮಾಡಿ 4 ಬಾರಿ ಶಾಲೆ ‘ಪರಿಸರ ಮಿತ್ರ ಪ್ರಶಸ್ತಿ’ಗೆ ಭಾಜನವಾಗುವಂತೆ ಪ್ರಯತ್ನಿಸಿದ್ದೇನೆ. ಜಾತ್ರೆಯಂತಹ ಸ್ಥಳದಲ್ಲಿ ಕನ್ನಡ ಅಂಕಿಗಳನ್ನು ಬಳಸಬೇಕೆಂಬ ಕರಪತ್ರಗಳನ್ನು ಅಂಟಿಸುವ ಹಾಗೂ ಹಂಚುವ ಕಾರ್ಯವನ್ನು ನಿವೃತ್ತಿಯ ನಂತರವೂ ಮಾಡುತ್ತಿದ್ದೇನೆ ಎಂದು ಹೇಳಿದರು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡಪರ ಹೋರಾಟಗಾರರಾದ ರಾಜು ಕೋಟೆನ್ನವರ ಮಾತನಾಡಿ, ಮರಾಠಿ  ಪ್ರಾಭಲ್ಯವಿದ್ದ ಅಂದಿನ ಮುಂಬೈ ಪ್ರಾಂತದಲ್ಲಿ ಕನ್ನಡ ಭಾಷೆ ಅನಾಥ ಪ್ರಜ್ಞೆಯಲ್ಲಿದ್ದಾಗ ರಾ.ಹ. ದೇಶಪಾಂಡೆ ಅವರು ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ, ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಕನ್ನಡದ ಎಲ್ಲ ಪ್ರಕಾರದ ಹೋರಾಟಗಳಿಗೆ ಕ.ವಿ.ವ. ಸಂಘಕ್ಕೆ ಸದಾ ನಮ್ಮ ಸಹಕಾರ ಇದೆ ಎಂದು ಹೇಳಿದರು. 

ವೇದಿಕೆಯಲ್ಲಿ ಡಾ ರಾಮೂ ಮೂಲಗಿ, ಬಾಬು ಭಜಂತ್ರಿ, ಸಹನಾ ಬನ್ನಿಗಿಡದ ಇದ್ದರು. ಸಂಕಲ್ಪ ಪ್ರದರ್ಶನ ಕಲೆಗಳ  ಸಂಶೋಧನಾ ಕೇಂದ್ರ, ಹುಬ್ಬಳ್ಳಿ ಇವರು ಜಾನಪದ ನೃತ್ಯ ಹಾಗೂ ಡಾ ರಾಮು ಮೂಲಗಿ ಕನ್ನಡ ಜನಪದ ಹಾಡುಗಾರಿಕೆ  ನಡೆಸಿಕೊಟ್ಟು ಜನಮನ ಸೂರೆಗೊಂಡರು. ಪ್ರಾರಂಭದಲ್ಲಿ ಬಾಬು ಭಜಂತ್ರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. 

ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಸಿದರು. ಪ್ರಿ. ಶಶಿಧರ ತೋಡಕರ ನಿರ್ವಹಿಸಿ, ವಂದಿಸಿದರು. ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಹಾಗೂ ಸಿ.ಎಸ್‌. ಪಾಟೀಲಕುಲಕರ್ಣಿ,  ಭೀಮು ಖಾಟವೆ, ಪ್ರಮೀಳಾ ಜಕ್ಕಣ್ಣವರ ಮುಂತಾದವರಿದ್ದರು.