ಬೆಂಗಳೂರು, ಏ.11,ನಗರದ ಹೊರವಲಯದ ಹೊಸಕೋಟೆಯ ನಡುವತ್ತಿಯ ಬಾರ್‌ನಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಪೊಲೀಸ್ ಮಹಜರು ವೇಳೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಮೃತಪಟ್ಟವರನ್ನು ನಡುವತ್ತಿ ಗ್ರಾಮದ ಮುನಿಪಿಳ್ಳಪ್ಪ (52)ಎಂದು ಗುರುತಿಸಲಾಗಿದೆ. ಮುನಿಪಿಳ್ಳಪ್ಪ ನಡುವತ್ತಿಯ ಬಾರ್‌ವೊಂದರಲ್ಲಿ ಮದ್ಯ ಕಳ್ಳತನ ಮಾಡಿ ಪರಾರಿಯಾಗಿದ್ದ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಿರುಮಶೆಟ್ಟಿಹಳ್ಳಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಸ್ಥಳ ಮಹಜರ್ ಮಾಡಲು ನಿನ್ನೆ ಕರೆದೊಯ್ದಿದ್ದರು. ಆರೋಪಿ ಕಳವು ಮಾಡಿದ್ದ ಮದ್ಯವನ್ನು ಬಾವಿಯ ಬಳಿ ಬಚ್ಚಿಟ್ಟ ಹಿನ್ನೆಲೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ ಆರೋಪಿಯ ಸಂಬಂಧಿಕರು ಪೊಲೀಸರು ಮದ್ಯ ಕಳ್ಳತನ ಮಾಡಿದಕ್ಕೆ ಮುನಿಪಿಳ್ಳಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು ಅದರ ನೋವು ತಾಳಲಾರದೇ ಆತ ಸಾವನ್ನಪ್ಪಿದ್ದು, ಅದನ್ನು ಮುಚ್ಚಿಹಾಕಲು ಪೊಲೀಸರು ಮುನಿಪಿಳ್ಳಪ್ಪ ಬಾವಿಗೆ ಬಿದ್ದು ಸಾವನಪ್ಪಿದ್ದಾನೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.