ಇ-ಆಸ್ತಿ ನೋಂದಣಿ ಸರಳೀಕರಣಕ್ಕೆ ಆಗ್ರಹಿಸಿ ಆಮ್ ಆದ್ಮಿ ಮನವಿ

ಇ-ಆಸ್ತಿ ನೋಂದಣಿ ಸರಳೀಕರಣಕ್ಕೆ ಆಗ್ರಹಿಸಿ ಆಮ್ ಆದ್ಮಿ ಮನವಿ Aam Aadmi petition demanding simplification of e-property registration

ಬೆಳಗಾವಿ 09: ಬೆಳಗಾವಿ ಪಾಲಿಕೆಯಿಂದ ಆರಂಭಿಸಲಾಗಿರುವ ಇ-ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವಂತೆ ಆಮ್ ಆದ್ಮಿ ಪಕ್ಷವು ಸರಕಾರವನ್ನು ಒತ್ತಾಯಿಸಿದೆ. 

ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಅಧ್ಯಕ್ಷ ವಿಜಯ ಪಾಟೀಲ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ಇ-ಆಸ್ತಿ ನೋಂದಣಿಗೆ ಸಂಬಂಧವಿರದ ದಾಖಲಾತಿಗಳನ್ನು ಕೇಳಲಾಗುತ್ತಿದ್ದು, ದಾಖಲಾತಿಗಳ ಸಂಖ್ಯೆ ಕಡಿಮೆಗೊಳಿಸಬೇಕೆಂದು ಅವರು ಆಗ್ರಹಿಸಿದರು. ಇ-ಆಸ್ತಿ ಮಹತ್ವದ ಪ್ರಕ್ರಿಯೆಯಾಗಿದೆ. ಬೆಂಗಳೂರಿನಲ್ಲಿ ಕೇವಲ 4 ದಾಖಲೆಗಳನ್ನು ಕೇಳುತ್ತಿರುವಾಗ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಹತ್ತು ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ ಎಂದು ಅವರು ಹೇಳಿದರು. 

ಅಲ್ಲದೇ, ಬಿ-ಖಾತಾ ನೋಂದಣಿ ಕುರಿತು ಮೊದಲು ಜನಸಾಮಾನ್ಯರಿಗೆ ಸ್ಪಷ್ಟತೆಯನ್ನು ಪಾಲಿಕೆ ಅಧಿಕಾರಿಗಳು ಕೊಡಬೇಕು. ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಆಯುಕ್ತರು ಈ ಕುರಿತು ಕೂಡಲೇ ಜನರಿಗೆ ಮಾಹಿತಿಯನ್ನು ನೀಡಬೇಕು. ಎರಡೂವರೆ ಲಕ್ಷ ಆಸ್ತಿಗಳಿರುವುದಾಗಿ ಪಾಲಿಕೆಯೇ ಮಾಹಿತಿ ನೀಡಿದೆ. ಹೀಗಿರುವಾಗ, ದಾಖಲಾತಿಗಳನ್ನು ಕಡಿಮೆ ಪಡೆಯುವ ಮೂಲಕ ಇ- ಆಸ್ತಿಯ ನೋಂದಣಿ ಮಾಡಬೇಕು. ಅಲ್ಲದೇ, ಸಿ.ಟಿ.ಎಸ್‌. ಆಧಾರದ ಮೇಲೆ ಮನೆ ಮನೆಗೆ ತೆರಳಿ ಇ-ಆಸ್ತಿಯನ್ನು ನೋಂದಾಯಿಸಿದರೆ ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.  

ಕಟ್ಟಡ ಅನುಮತಿ, ವಿನ್ಯಾಸ ಯೋಜನೆ ಮತ್ತು ಪೂರ್ಣಗೊಳಿಸುವಕೆ ಪ್ರಮಾಣಪತ್ರಗಳಂತಹ ಹಳೆಯ ಅಥವಾ ಅಪ್ರಾಯೋಗಿಕ ದಾಖಲೆಗಳಿಗಳನ್ನು ಪೂರೈಸುವಂತೆ ಒತ್ತಾಯ ಮಾಡಬಾರದು. ಅರ್ಜಿ ಸಲ್ಲಿಸಲು ಗಡುವು ವಿಧಿಸಬಾರದು, ಅರ್ಜಿಗಳನ್ನು ನಿರ್ದಿಷ್ಟ ಸಮಯದಲ್ಲಿಯೇ ವಿಲೇವಾರಿ ಮಾಡಬೇಕೆಂದು ಮನವಿಯಲ್ಲಿ ಆಗ್ರಹಪಡಿಸಿದರು.