ಮತಗಳ್ಳತನ ನಿಲ್ಲಿಸಿ ಅಭಿಯಾನಕ್ಕೆ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯಕುಮಾರ್ ಚಾಲನೆ

ಮತಗಳ್ಳತನ ನಿಲ್ಲಿಸಿ ಅಭಿಯಾನಕ್ಕೆ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯಕುಮಾರ್ ಚಾಲನೆ   AICC National Secretary Mayur Jayakumar launches campaign to stop vote rigging

ಯಲಬುರ್ಗಾ  28 : ಮತಗಳ್ಳತನದ ಮೂಲಕ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡುತ್ತಿದೆ. ಈ ಅಕ್ರಮದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನ ಜಾಗೃತಿ ಮೂಡಿಸಬೇಕು ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು. 

ಪಟ್ಟಣದ ಬಯಲುರಂಗ ಮಂದಿರದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮತಗಳ್ಳತನ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ. ಆ ಕಾರಣದಿಂದಲೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು. ಅಲ್ಲದೇ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಯಿತು’ ಎಂದು ದೂರಿದರು. ‘ಕರ್ನಾಟಕದ ಮಹಾದೇವಪುರ ಕ್ಷೇತ್ರವೊಂದರಲ್ಲೇ 1.6 ಲಕ್ಷ ಮತಗಳ್ಳತನವಾಗಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಆರು ತಿಂಗಳು ಶ್ರಮಪಟ್ಟು, ಮತಗಳ್ಳತವನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ. ಆ ಮನೆ ಬಿಜೆಪಿ ನಾಯಕರಿಗೆ ಸೇರಿದೆ’ ಎಂದು ಹೇಳಿದರು. ಅದೇ ಕ್ಷೇತ್ರದ 4,000 ಮತದಾರರಿಗೆ ವಿಳಾಸ ಮತ್ತು ಗುರುತಿನ ಪತ್ರ ಇರಲಿಲ್ಲ. ಒಟ್ಟಾರೆ ಕೇಂದ್ರ ಚುನಾವಣಾ ಆಯೋಗದ ನೆರವಿನೊಂದಿಗೆ ಬಿಜೆಪಿ ಮೋಸದ ಚುನಾವಣೆ ನಡೆಸಿದೆ ಎಂದು ದೂರಿದರು. ‘ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಪ್ರದೇಶಗಳ ಮತಪಟ್ಟಿಯಲ್ಲಿದ್ದ ಮತದಾರರನ್ನು ಬೇರೆ ಬಡಾವಣೆಗೆ ವರ್ಗಾವಣೆ ಮಾಡಲಾಗಿದೆ. ಆ ಜಾಗಕ್ಕೆ ಬಿಜೆಪಿ ಮತದಾರರನ್ನು ಸೇರಿಸಲಾಗಿದೆ. ಲೋಪಗಳ ಬಗ್ಗೆ ಆರು ತಿಂಗಳೊಳಗೆ ದೂರು ನೀಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ ಆರು ತಿಂಗಳು ಸಂಗ್ರಹವಾದ ಮಾಹಿತಿಯನ್ನು ಕೇಳಿದರೆ ಅದು ಡಿಲಿಟ್ ಆಗಿದೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ’ ಎಂದು ಕಿಡಿಕಾರಿದರು. ಬಿಹಾರದಲ್ಲಿ 65 ಲಕ್ಷ ಮತಗಳನ್ನು ಡಿಲಿಟ್ ಮಾಡಲಾಗಿದೆ. ಹರಿಯಾಣದಲ್ಲೂ ಭಾರೀ ಪ್ರಮಾಣದಲ್ಲಿ ಮತಗಳನ್ನು ತೆಗೆದು ಹಾಕಲಾಗಿದೆ. ಆ ಜಾಗಕ್ಕೆ ಬಿಜೆಪಿ ಪರ ಇರುವ ಮತದಾರರನ್ನು ಸೇರಿಸಲಾಗಿದೆ. ಇದರಿಂದ ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಿದ್ದರೂ ಅಲ್ಲಿ ಅಂತರ ಒಂದೂವರೆ ಲಕ್ಷಕ್ಕೆ ಇಳಿದಿದೆ. ರಾಜ್ಯ ಚುನಾವಣಾ ಆಯೋಗವೂ ಕೇಂದ್ರ ಚುನಾವಣಾ ಅಯೋಗದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಆರೋಪಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇರಿಬಸಪ್ಪ ನಿಡಗುಂದಿ, ಹನುಮಂತಗೌಡ ಪಾಟೀಲ್ ಚಂಡೂರು, ಯಂಕಣ್ಣ ಯರಾಶಿ, ಸಂಗಣ್ಣ ತೆಂಗಿನಕಾಯಿ, ಎಂ ಏನ್ ನದಾಫ್, ಡಾ.ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ರೆಡ್ಡಿ ಶ್ರೀನಿವಾಸ, ಅಂಪಯ್ಯ ಹಿರೇಮಠ, ಸಾವಿತ್ರಿ ಗೊಲ್ಲರ , ಗಿರಿಜಮ್ಮ ಸಂಗಟಿ ,ಮಲ್ಲಮ್ಮ ಗೊಂದಿ ಸೇರಿ ಪಕ್ಷದ ಕಾರ್ಯಕರ್ತರು ಇದ್ದರು.