ಬೆಂಗಳೂರು, ಏ. 14, ಕೊರೋನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಬಿಗಿ ಲಾಕ್ ಡೌನ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಕೊರೊನಾ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಮತ್ತಷ್ಟು ಕ್ರಮ ಬಿಗಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಾಗಿರುವ ಬೀದರ್, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಂಡು ಆ ಜಿಲ್ಲೆಗಳಲ್ಲಿ ಒಬ್ಬೊಬ್ಬ ಎಡಿಜಿಪಿಗಳನ್ನು ನೇಮಿಸಿ ಮತ್ತಷ್ಟು ನಿಗಾ ವಹಿಸಲಾಗುವುದು. ಜನರ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.ಈಗಿರುವ ಭದ್ರತೆಗಿಂತ ಮತ್ತಷ್ಟು ಭದ್ರತೆ, ಇನ್ನಷ್ಟು ಬ್ಯಾರಿಕೇಡ್ ಗಳನ್ನು ಹಾಕಿ ಮತ್ತಷ್ಟು ತಪಾಸಣೆ ಹೆಚ್ಚಿಸಿ ವಾಹನಗಳ ಓಡಾಟ ನಿರ್ಬಂಧಿಸಲಾಗುವುದು. ಈಗಾಗಲೇ 57 ಸಾವಿರ ವಾಹನ ಸೀಜ್ ಮಾಡಿದ್ದೇವೆ. ಒಂದು ವೇಳೆ ನಿಯಮ ಮೀರಿ ಮತ್ತೆ ಮತ್ತೆ ಓಡಾಡಿದರೆ ಮತ್ತಷ್ಟು ವಾಹನ ಗಳನ್ನು ಜಪ್ತಿ ಮಾಡಲಾಗುವುದು. ಸಾರ್ವಜನಿಕರ ಓಡಾಟದ ಸಮಯವನ್ನು ಕಡಿತಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.