ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರೀದೀಪವಾದ ನಿವೃತ್ತ ಶಿಕ್ಷಕ ಬೊಮ್ಮನಗೌಡರ ಉಪಕಾರ ಸ್ಮರಣೆ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರೀದೀಪವಾದ ನಿವೃತ್ತ ಶಿಕ್ಷಕ ಬೊಮ್ಮನಗೌಡರ ಉಪಕಾರ ಸ್ಮರಣೆ  A tribute to retired teacher Bommanagowda, a guiding light for the academic progress of students


 ಶಿರಹಟ್ಟಿ 03 : ಶ್ರೀ ಜಗದ್ಗುರು ಫಕೀರೇಶ್ವರ ಪ್ರೌಢಶಾಲೆಯಲ್ಲಿ 1994ರಿಂದ ಕೋಚಿಂಗ್ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ನಿವೃತ್ತ ಶಿಕ್ಷಕ ಶ್ರೀ ಡಿ.ಸಿ. ಬೊಮ್ಮನಗೌಡರ ಉಪಕಾರ ಸ್ಮರಣೆ ಕಾರ್ಯಕ್ರಮವನ್ನು ಸೆ. 6ರಂದು ಬೆಳಟ್ಟಿಯಲ್ಲಿ ಆಯೋಜಿಸಲಾಗಿದೆ.  

ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದ ಬೊಮ್ಮನಗೌಡರು ಕೋಚಿಂಗ್ ನೀಡುವ ಮೂಲಕ ಅನೇಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸೇವೆಯನ್ನು ಸ್ಮರಿಸಿ, ವಿದ್ಯಾರ್ಥಿಗಳು ಹಾಗೂ ಪಾಲಕರು ನೀಡಿದ ಸಹಕಾರ, ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  

ಬೊಮ್ಮನಗೌಡರ ನಿಸ್ವಾರ್ಥ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಬದ್ಧತೆಯನ್ನು ಗುರುತಿಸಿದ ಜಗದ್ಗುರುಗಳು, ಶ್ರೀ ಜಗದ್ಗುರು ಫಕೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ್ದರು. ಅಲ್ಲಿ ಉತ್ತಮ ಬೋಧನೆ ಹಾಗೂ ಆಡಳಿತದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  

ನಂತರ ಅದೇ ಸಂಸ್ಥೆಯ ಎಸ್‌ಎಪಿಎಸ್ ಪ್ರೌಢಶಾಲೆ, ನೆಗಳೂರು ಶಾಲೆಯ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಆಡಳಿತವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಬಳಿಕ ಎಸ್‌ಎಪಿಎಸ್ ಪ್ರೌಢಶಾಲೆ, ಶಿರಹಟ್ಟಿ ವರ್ಗಾವಣೆಗೊಂಡ ಅವರು ಅಲ್ಲಿಯೂ ಉತ್ತಮ ಆಡಳಿತದೊಂದಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.  

ಅವರ ಬಳಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಉತ್ತಮ ಸ್ಥಾನಮಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅವರ ಶೈಕ್ಷಣಿಕ ಸೇವೆಗೆ ಸಾಕ್ಷಿಯಾಗಿದೆ.  

ಸೆ. 6ರಂದು ಬೆಳಗ್ಗೆ 10 ಗಂಟೆಗೆ ಬೆಳಟ್ಟಿಯ ಜಗದ್ಗುರು ಫಕೀರೇಶ್ವರ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು,  ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ. ಇದೇ ವೇದಿಕೆಯಲ್ಲಿ  ಫಕೀರ ಸಿದ್ಧರಾಮ ಮಹಾಸ್ವಾಮಿಗಳ 13ನೇ ಪಟ್ಟಾಧಿಕಾರಿ ಹಾಗೂ ಫಕೀರೇಶ್ವರ ಸಂಸ್ಥಾನ, ಶಿರಹಟ್ಟಿ ಅವರ ತುಲಾಭಾರ ಕಾರ್ಯಕ್ರಮವೂ ನೆರವೇರಲಿದೆ.  

ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಉತ್ತರಾಧಿಕಾರಿಗಳು ಹಾಗೂ ಫಕೀರೇಶ್ವರ ಸಂಸ್ಥಾನಮಠ, ಶಿರಹಟ್ಟಿ ಅವರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.  

ಬೊಮ್ಮನಗೌಡರ ಸೇವೆಯಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಶ್ರೀ ಡಿ.ಸಿ. ಬೊಮ್ಮನಗೌಡರು ಮನವಿ ಮಾಡಿದ್ದಾರೆ.