ಬೆಂಗಳೂರು, ಏ 18, ಮಹಾಮಾರಿ ಕರೋನ ವಿಶ್ವವನ್ನು ಬಹಳ ಸಂಕಷ್ಟಕ್ಕೆ ದೂಡಿದೆ. ಇದರಿಂದ ಬಡವರು, ದಿನಗೂಲಿ ನೌಕರು, ವಲಸೆ ಕಾರ್ಮಿಕರು ಪಡಬಾರದಕಷ್ಟ ಪಡುತ್ತಿದ್ದಾರೆ. ಮಾನಸಿಕ ತುಮುಲಕ್ಕೆ ಗುರಿಯಾಗಿದ್ದಾರೆ. ಅವರ ನೆರವಿಗೆ ಉಳ್ಳವರು ಬರಲೇಬೇಕಿದೆ, ಇದು ಮನುಷ್ಯ ಮತ್ತೊಬ್ಬ ಮನುಷ್ಯ ಪಾಲಿಗೆ ಮಿಡಿಯುವ ಕಾಲ, ಸ್ಪಂದಿಸುವ ಕಾಲವಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ ಬಡವರು, ನಿರ್ಗತಿಕರ ಬದುಕು ಮೂರಾಬಟ್ಟೆಯಾಗದಂತೆ ನೋಡಿಕೊಳ್ಳುವ ಗುರುತರ ಕಾಲಘಟ್ಟ ಇದಾಗಿದೆ. ಸರ್ಕಾರ ತನ್ನ ಇತಿಮಿಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ, ಸಾಯದಂತೆ ನೋಡಿ ಕೊಳ್ಳಲು ಶಕ್ತಿ ಮೀರಿ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮ ರೂಪಿಸಿದೆ. ತೀರ್ಮಾನ ತೆಗೆದುಕೊಂಡಿದೆ. ಆದರೆ ಕೇವಲ ಸರ್ಕಾರ ವೊಂದರಿಂದಲೇ ಎಲ್ಲವನ್ನು ನಿಭಾಯಿಸಲು ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ವಿಶ್ವಕ್ಕೆ ಎದುರಾಗಿರುವ ಸಂಕಷ್ಠದ ಸನ್ನಿವೇಶ. ಹೀಗಾಗಿ ಇದರಿಂದ ಪಾರಾಗಲು ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ, ಹೆಗಲು ಕೊಡಬೇಕಿದೆ ಎನ್ನುತ್ತಾರೆ. ಸಾಮಾಜಿಕ ಕಾರ್ಯಕರ್ತೆ ಭಾರತಿ ಮುಗ್ದುಮ್. ಕನ್ನಡ ಯುಎನ್ಐ ಸಂಸ್ಥೆಯೊಂದಿಗೆ ಈ ಕುರಿತು ವಿವರವಾಗಿ ಮಾತನಾಡಿದ ಅವರು, ಇದುವರೆಗೆ 250 ಕ್ಕೂ ಹೆಚ್ಚು ಜನರ ಮಾತನಾಡಿ ಅವರಿಗೆ ಸಮಾಧಾನ ಹೇಳಿದ್ದಾರೆ ಅಗತ್ಯ ನೆರವು ಒದಗಿಸಿಕೊಟ್ಟಿದ್ದಾರೆ, ಕೈಲಾದಷ್ಟು ಸಹಾಯ ಮಾಡಿದ್ದಾರೆ, ತಮ್ಮ ಅನುಭವವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಗಂಡ- ಹೆಂಡತಿ ಇಬ್ಬರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಮಯದಲ್ಲಿ ಆ ದಂಪತಿಗಳ ಜೊತೆ ಮಾತನಾಡಿ ಸಮಾಧಾನ ಹೇಳಿದ್ದಾರೆ. ನಿಮಗೆ ಕಷ್ಟವಾದರೆ ನನ್ನ ಮನೆ ಪಕ್ಕದಲ್ಲೆ ಇದೆ ಬನ್ನಿ, ಏನಾದರೂ ಸಹಾಯ ಬೇಕಿದ್ದರೆ ಕೇಳಿ ಎಂದು ಹೇಳಿದ್ದನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ.
ನಮ್ಮನ್ನು ಯಾರೊಬ್ಬರು ಕೇಳುವವರಿಲ್ಲ ಕಷ್ಟ ಕಾಲದಲ್ಲಿ ನಮಗೆ ಇಂತಹ ಭರವಸೆ ಮಾತು ಯಾರಿಂದಲೂ ಬರಲಿಲ್ಲ ಎಂದು ಆ ದಂಪತಿಗಳು ಸಮಾಧಾನಪಟ್ಟು ಕೊಂಡಿದ್ದನ್ನು ಭಾರತಿ ನೆನಪು ಮಾಡಿಕೊಳ್ಳುತ್ತಾರೆ.ಹುಡುಗನೊಬ್ಬ ದೂರದ ಊರಿಗೆ ಹೋಗಲಾರದೇ ಪರಿತಪಿಸುತ್ತಿದ್ದಾನೆ. ಅವನ ತಂದೆ ತಾಯಿ ಬೇರೆ ಊರಿನಲ್ಲಿದ್ದಾರೆ. ಅವನಿಗೆ ನಿತ್ಯ ಸಮಾಧಾನ ಮಾತು ಹೇಳುತ್ತಿದ್ದೇನೆ. ಈ ಕಷ್ಟ ಇನ್ನು ಕೆಲವೇ ದಿನ, ಆಮೇಲೆ ಎಲ್ಲಾ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡಿದ್ದೇನೆ. ಅವನ ಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟಿದ್ದೇನೆ ಎಂದೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದು ಜಗತ್ತಿಗೆ ಬಂದಿರುವ ಮಹಾಸಂಕಟದ ಸನ್ನಿವೇಶ. ಮಾನವೀಯತೆ ಮೆರೆಯಲು ಒಬ್ಬರಿಗೊಬ್ಬರು ಸಹಾಯ ಮಾಡಲು ಇದು ಸೂಕ್ತ ಕಾಲ. ಸರ್ಕಾರವೊಂದರಿಂದಲೇ ಎಲ್ಲಾ ಸಮಸ್ಯೆ ನಿವಾರಿಸಲು ಸಾಧ್ಯವಾಗುವುದಿಲ್ಲ. ಇನ್ಫೋಸಿಸ್ ಫೌಂಡೇಷನ್ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಒಂದು ತಿಂಗಳಿಗೆ ಆಗುವಷ್ಟು ಪಡಿತರವನ್ನು ಕೊಡುವ ಕೆಲಸವನ್ನು ರಾಜ್ಯಾದ್ಯಂತ ಮಾಡುತ್ತಿದೆ.ಜೈನ ಸಮುದಾಯ ಬೆಂಗಳೂರಿನ ಅರಮನೆ ಆವರಣದಲ್ಲಿ ದೊಡ್ಡ ಅಡುಗೆ ಮನೆ ತೆರೆದು ಪ್ರತಿನಿತ್ಯ 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದೆ.ಅನೈನ್ ಎಂಬ ಎನ್ ಜಿ ಒ ಸಂಸ್ಥೆ ಪ್ರತಿನಿತ್ಯ 1500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ.
ಸರ್ಕಾರ ಮೂರು ತಿಂಗಳ ರೇಷನ್ ಅನ್ನು ಮುಂಗಡವಾಗಿ ಕೊಡುತ್ತಿದೆ ಕೆಲವರು ರೇಷನ್ ಸಿಕ್ಕಿಲ್ಲ, ಕೆಲವರು ಮೆಡಿಸಿನ್ ಸಿಗುತ್ತಿಲ್ಲ ಎಂದು ನಿತ್ಯವೂ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಇಂತಹ ಕಡೆ ರೇಷನ್ ಹಾಗೂ ಮೆಡಿಸಿನ್ ಸಿಗುತ್ತದೆ, ಇಂತಹವರನನ್ನು ಸಂಪರ್ಕ ಮಾಡಿ, ನಿಮಗೆ ಬೇಕಾದ ಅನುಕೂಲ ಮಾಡಿಕೊಡುತ್ತಾರೆ ಎಂದು ಸಾಂತ್ವನ, ಸಮಾಧಾನ ಹೇಳುತ್ತಿದ್ದಾರೆ.ನೇರವಾಗಿ ಹಣದ ಸಹಾಯ ಮಾಡದೇ ಇದ್ದರೂ ಇಂತಹ ಸನ್ನಿವೇಶದಲ್ಲಿ ಬಡ ಕುಟುಂಬಗಳಿಗೆ ಸ್ವಚ್ಛತೆ ಕಾಪಾಡುವ ಪರಿಕರಗಳು ಬಹಳ ಅಗತ್ಯವಾಗಿದೆ. ಈಗಾಗಲೇ ಅನೇಕ ಕಡೆ ಹಲವರು, ಮಾಸ್ಕ್, ಸೋಪು, ಸ್ಯಾನಿಟೈಸರ್ ಮತ್ತು ಅಗತ್ಯ ಔಷಧಗಳನ್ನು ಬಡವರಿಗೆ ಉಚಿತವಾಗಿ ತಲುಪಿಸುತ್ತಿದ್ದಾರೆ.
ಇದೇ ಈ ಕ್ಷಣದಲ್ಲಿ ಆಗಬೇಕಿರುವ ಕೆಲಸ, ಸಹಾಯ ಎಂಬುದನ್ನು ನಾನು ಮನಗಂಡಿದ್ದೇನೆ.ಇದು ಕೂಡ ಬಹಳ ದೊಡ್ಡಮಟ್ಟದ ಸಹಾಯ , ಅದೂ ಈ ಕ್ಷಣಕ್ಕೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ.!!ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವ ಸಮಯ ಇದು. ಚಿಕ್ಕಪುಟ್ಟ ಸಹಾಯವೂ ಬಹಳ ಮುಖ್ಯವಾಗಿದೆ. ಕರೋನಾ ವಿರುದ್ಧ ಹೋರಾಡುವುದು ಒಂದು ಭಾಗವಾದರೆ ಮಹಾಮಾರಿಯ ಸಂಕಟಕ್ಕೆ ಸಿಕ್ಕಿಕೊಂಡು ಒದ್ದಾಡುತ್ತಿರುವ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರ ಬದುಕು ಮೂರಾಬಟ್ಟೆ ಆಗದಂತೆ ನೋಡಿಕೊಳ್ಳುವ ಹೊಣೆ ಸಮಾಜ ಹಾಗೂ ಸರ್ಕಾರ, ಮತ್ತು ಪ್ರತಿಯೊಬ್ಬರ ಮೇಲೂ ಇದೆ. ಬದುಕು ಮುಳುಗುತ್ತಿರುವ ಸಮಯದಲ್ಲಿ ಹುಲ್ಲುಕಡ್ಡಿಯ ಸಹಾಯ, ಆಸರೆಯೂ ಬಹಳ ದೊಡ್ಡದೇ ಎಂಬುದು ಅವರ ಮಾತಿನ ಧಾಟಿಯಾಗಿತ್ತು, ಸಾರಂಶವಾಗಿತ್ತು .ಸಹಾಯ ಮಾಡುವುದೆಂದರೆ ಕೋಟಿ, ಕೋಟಿ ಹಣವನ್ನು ಚೀಲದಲ್ಲಿ ತುಂಬಿಕೊಂಡು ಹಂಚುವುದೇ ಅಲ್ಲ.! ಕೈಲಾದ ಸಣ್ಣ, ತಕ್ಷಣದ, ಅಗತ್ಯದ ಸಹಾಯ ಸಮಯದಲ್ಲಿ ಬಹಳ ಮುಖ್ಯವಾಗುತ್ತದೆ ಎಂಬ ಭಾರತಿ ಅವರ ಮಾತಿನಲ್ಲಿ ಸತ್ಯವಿದೆ , ಬಹಳ ಅರ್ಥವೂ ಇದೆ. ಕಷ್ಟಕ್ಕೆ ಸ್ಪಂದಿಸುವ ಜನ ಇದ್ದಾರೆ ಎಂದರೆ ಎಷ್ಟೋ ಕುಟುಂಬಗಳು ನೆಮ್ಮದಿ ಕಾಣಲಿವೆ. ಇದೇ ತಾನೆ ನಾಳಿನ ಬದುಕಿಗೆ ಬೇಕಾದ ಭರವಸೆ, ಆತ್ಮ ವಿಶ್ವಾಸ, ಆಸರೆತಾನೆ?