ಬನ್ನೂರು ಗ್ರಾಮದ ಗಣ್ಯ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ

ಬನ್ನೂರು ಗ್ರಾಮದ ಗಣ್ಯ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ  A silent ceremony in memory of Dundigowda, a prominent Basana Gowda of Bannur village.

ಶಿಗ್ಗಾಂವಿ, ಆ. 4: ತಾಲೂಕಿನ ಬನ್ನೂರು ಗ್ರಾಮದ ಉನ್ನತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಹಿರಿಯ ಜೀವಿ, ಸಾಮಾಜಿಕ ಕಳಕಳಿಯ ಹರಿಕಾರ ಹಾಗೂ ಗ್ರಾಮದ ಅಭಿವೃದ್ಧಿಯ ಹಿತಚಿಂತಕ ಬಸನಗೌಡ ದುಂಡಿಗೌಡ್ರ ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.  

ಈ ಸಂದರ್ಭದಲ್ಲಿ ಉನ್ನತಿ ಕಾನ್ವೆಂಟ್ ಶಾಲಾ ಆಡಳಿತ ಮಂಡಳಿ ಸಲಹೆಗಾರ ಮಹ್ಮದ್ ಜಾಫರ್ ಮಾತನಾಡಿ, ಬಸನಗೌಡ ದುಂಡಿಗೌಡ್ರ ಅವರು ಶಿಕ್ಷಣ ಪ್ರೇಮಿಯಾಗಿದ್ದು, ತಮ್ಮ ಸುಪುತ್ರ ಹಾಗೂ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರ ಅವರ ಮೂಲಕ ತಂದೆಯವರ ಹೆಸರಿನಲ್ಲಿ ಅನೇಕ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಉನ್ನತಿ ಶಾಲೆಗೂ ಅಪಾರ ದೇಣಿಗೆ ನೀಡಿ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.  

ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮಂಗಲಾ ಹಿರೇಮಠ ಮಾತನಾಡಿ, ಗ್ರಾಮದ ಮಹಾನ್ ಚೇತನವೊಂದು ಅಸ್ತಂಗತವಾಗಿರುವುದು ಗ್ರಾಮಸ್ಥರು ಹಾಗೂ ತಾಲೂಕಿನ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.  ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.