ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಕೃಷಿ ಸಚಿವರ ಮಹತ್ವದ ಸಭೆ

ಬೆಂಗಳೂರು, ಏ.13,  ಕೋವೀಡ್ -19 ನಿರ್ಬಂಧಿತ ಸಮಯದಲ್ಲಿ ಕೃಷಿ  ಸಂಬಂಧಿಸಿದಂತೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಹಾಗೂ ರೈತರ  ಗ್ರಾಹಕರ ನಡುವಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇಂದು  ಕೃಷಿ ಸಚಿವ ಬಿ. ಸಿ. ಪಾಟೀಲ್  ಬೆಂಗಳೂರಿನಲ್ಲಿಂದು ಕೃಷಿ ಕಾರ್ಯದರ್ಶಿಗಳು  ಆಯ್ತುಕರು, ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕೃಷಿ ಇಲಾಖೆಯ  ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ವಿಕಾಸಸೌಧದ ಕಚೇರಿಯಲ್ಲಿ  ನಡೆದ ಸಭೆಯಲ್ಲಿ ಮುಂಗಾರು ಹಂಗಾಮಿನ‌ ಜಿಲ್ಲಾವಾರು ಬಿತ್ತನೆ ಬೀಜ, ರಸಗೊಬ್ಬರ  ಬೇಡಿಕೆ, ಬಿಟಿ ಹತ್ತಿ ದಾಸ್ತಾನು, ಲಭ್ಯತೆ ಕುರಿತು ಚರ್ಚಿಸಿದ ಸಚಿವರು, ರೈತರಿಗೆ ಯಾವುದೇ  ಕಾರಣಕ್ಕೂ ಬಿತ್ತನೆ ಬೀಜಕ್ಕಾಗಲಿ ರಸಗೊಬ್ಬರಕ್ಕಾಗಲಿ ಕೊರತೆಯಾಗದಂತೆ  ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಪರಿಕರ ಮಾರಾಟ ಮಾಡುವ ಮುನ್ನ  ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಅಗ್ರಿ ವಾರ್ ರೂಮ್  ಕಾರ್ಯವೈಖರಿ,  ಕಿಸಾನ್ ಸಮ್ಮಾನ್ ನಿಧಿ ಹಾಗೂ ಬೆಳೆ ವಿಮೆ‌ ಯೋಜನೆಯ ಪ್ರಗತಿ ಸಂಬಂಧ ಕೃಷಿ ಅಧಿಕಾರಿಗಳ  ಜೊತೆ ಚರ್ಚಿಸಲಾಯಿತು‌.ಸಭೆ ಬಳಿಕ ಕೃಷಿ ಸಚಿವರು ಮಾತನಾಡಿ,‌ ಏ.6 ರಿಂದ  11ರವರೆಗೆ 19 ಜಿಲ್ಲೆಗಳಿಗೆ ಭೇಟಿ ನೀಡಿ‌,‌ ಕೃಷಿ ಚಟುವಟಿಕೆಗಳು ರೈತರ ಸಮಸ್ಯೆಗಳ  ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಕೋವಿಡ್-19 ಲಾಕ್‌ ಡೌನ್ ನಿಂದ ಕೃಷಿ  ಚಟುವಟಿಕೆಗಳ ಮೇಲಿನ ಪರಿಣಾಮ ಪ್ರವಾಸದ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗಿದೆ  ಎಂದರು.ಇಂದು ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಸಭೆ ನಡೆಸಿ,‌ ಕೋವಿಡ್-19 ಹಿನ್ನೆಲೆಯಲ್ಲಿ  ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಲಹೆಗಳನ್ನು ಪಡೆಯಲಾಗಿದೆ‌. ಪ್ರಸ್ತುತ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಯಾವ ರೀತಿ ಕೆಲಸ ನಿರ್ವಹಿಸಬಹುದೆಂಬ  ನಿಟ್ಟಿನಲ್ಲಿ‌ ಚರ್ಚಿಸಲಾಗಿದೆ. ಮುಂಗಾರು ಹಂಗಾಮಿಗೆ ಬೀಜ ರಸಗೊಬ್ಬರದ  ಕೊರತೆಯಾಗುವುದಿಲ್ಲ. ಈ ಬಗ್ಗೆ ರೈತರಿಗೆ ಯಾವುದೇ ಸಂಶಯ ಬೇಡ. ಸರ್ಕಾರ ರೈತರ  ಪರವಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು  ಬದ್ಧವಾಗಿದೆ. ರೈತರು ಎದೆಗುಂದುವ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದರು.