ಹಾಸ್ಯಕೂಟವೇ ನನ್ನ ಆರೋಗ್ಯದ ಗುಟ್ಟು : ಅರವಿಂದ ಹುನಗುಂದ

ಹಾಸ್ಯಕೂಟವೇ ನನ್ನ ಆರೋಗ್ಯದ ಗುಟ್ಟು : ಅರವಿಂದ ಹುನಗುಂದ A sense of humor is the secret to my health: Aravind Hunagund

ಲೋಕದರ್ಶನ ವರದಿ 

ಬೆಳಗಾವಿ - ನಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ 13 ವರ್ಷ ಕಳೆದಿರುವ ವ್ಯಕ್ತಿ. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಬಿ.ಪಿ. ಮುಂತಾದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಆದರೆ ನನಗೆ ಇವಾವೂ ಇಲ್ಲದೇ ಆರೋಗ್ಯವಾಗಿದ್ದೇನೆ. ಪ್ರತಿ ತಿಂಗಳೂ ನಾನು ನಗುತ್ತ ಜನರನ್ನೂ ನಗಿಸುತ್ತ, ನಗುವ ವಾತಾವರಣದಲ್ಲಿಯೇ ಇರುವಂತೆ ಮಾಡಿರುವ ಹಾಸ್ಯಕೂಟವೇ ನನ್ನ ಆರೋಗ್ಯದ ಗುಟ್ಟು ಎಂದು ನಗೆಮಾತುಗಾರ ಅರವಿಂದ ಹುನಗುಂದ ಇಂದಿಲ್ಲಿ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ನೆಹರು ನಗರದಲ್ಲಿರವ ಕನ್ನಡ ಭವನದಲ್ಲಿ ಬೆಳಗಾವಿಯ ಹಾಸ್ಯಕೂಟದವರಿಂದ ನಕ್ಕು ಹಗುರಾಗಿ ಎಂಬ ಹಾಸ್ಯ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹಾಸ್ಯಕೂಟ ಕಲಾವಿದರಾದ ಅರವಿಂದ ಹುನಗುಂದ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.  

ಮುಂದೆ ಮಾತನಾಡುತ್ತ ಹುನಗುಂದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳು ಹೇಗಿರಬೇಕು. ಗುರುಗಳ ಜವಾಬ್ಧಾರಿಗಳೇನು ಎಂಬುದೇನು ಅಲ್ಲದೇ ಬ್ಯಾಂಕ್‌ದಲ್ಲಿ ತಾವು ಸೇವೆ ಸಲ್ಲಿಸುತ್ತಿರುವಾಗಿನ ಪ್ರಸಂಗಗಳನ್ನು ಹಾಸ್ಯಲೇಪಿತ ಮಾತುಗಳೊಂದಿಗೆ ಹೇಳುತ್ತ  ಜನರನ್ನು ನಗೆಗಡಲಲ್ಲಿ ತೇಲಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮಟಗುಡ್ಡ ಅವರು ಮಾತನಾಡುತ್ತ ಇಂದು ಸಾಹಿತ್ಯ, ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಬೆಳಗಾವಿಯು ಧಾರವಾಡವನ್ನು  ಹಿಂದೆ ಹಾಕುತ್ತಲಿದೆ ಇದು ಎಲ್ಲರೂ ಅಭಿಮಾನ ಪಡುವಂತಹ ಸಂಗತಿ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಜಿ. ಎಸ್‌. ಸೋನಾರ ಸಿನಿಮಾ ನಟರ, ರಾಜಕಾರಣಿಗಳ ಅನುಕರಣೆ ಮಾಡಿ ತೋರಿಸಿ ನಗೆಯಲೆ ಎಬ್ಬಿಸಿದರು. 

 ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಾತನಾಡಿ ಹಾಸ್ಯಕೂಟ ಕಲಾವಿದರು ರಾಜ್ಯ, ಹೊರರಾಜ್ಯದ ಹಲವಾರು ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ಹೊಟ್ಟೆ ಹೊಣ್ಣಾಗುವಂತೆ ನಗೆಸಿದ್ದಾರೆ. ದೂರದರ್ಶನದಲ್ಲಿ ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಯಶಸ್ಸಿನಲ್ಲಿಯೇ ನಾನು ಖುಷಿ ಪಡುತ್ತೇನೆ ಎಂದು ಹೇಳಿ ತಮ್ಮ ನಿಜ ಜೀವನದಲ್ಲಿ ನಡೆದ ಕೆಲ ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರು. 

ನಗೆ ಮಾತುಗಾರ ಎಂ.ಬಿ. ಹೊಸಳ್ಳಿ, ಎಲ್ಲ ಹಾಸ್ಯ ಭಾಷಣಕಾರರು ಜನರನ್ನು ನಗಿಸಲು, ವ್ಯಂಗ್ಯ ಮಾಡಲು ಹೆಚ್ಚಾಗಿ ಮಡದಿಯನ್ನು, ಹೆಂಗಸರನ್ನು ಉಪಯೋಗಿಸಿಕೊಳ್ಳುತ್ತಾರೆ. ಯಾರೂ ಬೇಸರ ಪಟ್ಟುಕೊಳ್ಳುವ ಅವಶ್ಯಕತೆಯಿಲ್ಲ ಇದು ಕೇವಲ ಹಾಸ್ಯಕ್ಕಾಗಿ ಮಾತ್ರ ಎಂದು ಹೇಳಿ ಗಂಡ - ಹೆಂಡತಿ ನಡುವಿನ ಹಲವಾರು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡು ಜನರನ್ನು  ರಂಜಿಸಿದರು. ಇದೇ ಸಂದರ್ಭದಲ್ಲಿ ಗುಂಡೇನಟ್ಟಿ ಮಧುಕರ ಅವರನ್ನು ಸನ್ಮಾನಿಸಲಾಯಿತು.  

ಸಾಹಿತಿಗಳಾದ ಸುಭಾಷ ಏಣಗಿ ಅತಿಥಿಗಳಾಗಿ ಆಗಮಿಸಿದ್ದರು. ಲೇಖಕಿ ಶ್ರೀಮತಿ ಪಾರ್ವತಿ ತುಪ್ಪದ ಅವರ “ಶ್ರೀ ಲೀಲಾಮೃತ”ಕೃತಿ ಬಿಡುಗಡೆಗೊಂಡಿತು. ಶ್ರೀಮತಿ ಮಹಾನಂದಾ ಪರುಶೆಟ್ಟಿ ಕವನ ವಾಚಿಸಿದರು. ಶ್ರೀಮತಿ ಎಂ.ಎ. ದೇಸಾಯಿ ನಾಡಗೀತೆ ಹಾಡಿದರು. ಶ್ರೀಮತಿ ಹೇಮಾ ಸೊನೊಳ್ಳಿ, ಎಂ. ವೈ ಮೆಣಸಿನಕಾಯಿ, ವಿ.ಎಂ. ಅಂಗಡಿ ಸ್ವಾಗತಿಸಿ ಪರಿಚಯಿಸಿದರು. ತಾಜಾಜಿ, ಶಿವಾನಂದ ತಲ್ಲೂರ ನಿರೂಪಿಸಿದರು. ವೀರಭದ್ರ ಅಂಗಡಿ ವಂದಿಸಿದರು.