ವಿಜ್ಞಾನಿಗೂ ದೇವರೆ ಬೇಕಂತೆ!

ಇತ್ತಿಚಿಗೆಕೋ ಆರೋಗ್ಯ ಸರಿ ಇಲ್ಲ. ಯಾವಾಗ ನೋಡಿದರೂ ಒಂದಲ್ಲ ಒಂದು ರೀತಿಯ ಅನಾರೋಗ್ಯ ಬಾಧಿಸುತ್ತಿದೆ. ತಿಂದಿದ್ದು ಉಂಡಿದ್ದು ಜೀರ್ಣವಾಗದೇ ತೊಂದರೆ ಕೊಡುತ್ತದೆ. ದೊಡ್ಡ ಖಾಯಿಲೆ ಇಲ್ಲವಾದರೂ ನಿತ್ಯ ಕಿರಿಕಿರಿ ತಪ್ಪುತ್ತಿಲ್ಲ. ಹಾಗಾಗಿ ಒಂದಷ್ಟು ವ್ಯಾಯಾಮ, ಪ್ರಾಣಯಾಮ ಮಾಡೋಣ ಎಂದು ತರಗತಿಗೆ ಸೇರಿಕೊಂಡೆ. ವ್ಯಾಯಾಮ ತರಗತಿಯಲ್ಲಿ ಕಲಿಸುವಾಗ ಮಾಡಿದಷ್ಟು ತಾನೊಬ್ಬನೇ ಕುಳಿತಾಗ ವ್ಯಾಯಾಮವಾಗಲಿ ಧ್ಯಾನವಾಗಲಿ ಮಾಡಲಾಗುತ್ತಿಲ್ಲ. ಧ್ಯಾನಕ್ಕೆ ಕುಳಿತರಂತು ಏಕಾಗ್ರೆ ಸಿಗುವುದೇ ಇಲ್ಲ. ಒಂದು ರೀತಿ ದೇಹ ಎಲ್ಲ ಬಿಸಿಯಾಗಿ ಶೇಕ್ ಅಗಿಬಿಡುತ್ತೆ. ಎಂದು ಯೋಗ ತರಬೇತಿ ಸ್ನೇಹಿತೆ ಬಳಿ ಒಬ್ಬ ಹಿರಿಯರು ಹೇಳಿಕೊಂಡರು. 

ಮನುಷ್ಯನ ಆರೋಗ್ಯಕ್ಕೆ  ಉತ್ತಮ ದಿನಚರಿ,  ತಿನ್ನುವ ಆಹಾರ, ಒಂದಷ್ಟು ದೇಹಶ್ರಮ ಇರಬೇಕು ಎನ್ನುವುದು ಸಹಜ. ಇದೆಲ್ಲ ಇದ್ದು ಕೂಡ ಆರೋಗ್ಯ ತಪ್ಪುತ್ತದೆ ಎಂದರೆ ನಮ್ಮಲ್ಲಿಯ ಜೀವ ಕೋಶಗಳು ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ನಮ್ಮ ಮೂಲಾಧಾರದಲ್ಲಿ ಒಂದು ಪುಟ್ಟ ಕಣ ಅಂದರೆ ಪರಮಾಣುವಿಗಿಂತ ಚಿಕ್ಕದು ಅಂತ ಹೇಳುತ್ತಾರೆ. ಅ ಕಣದ ರೂಪದಲ್ಲಿ ಉತ್ಪತ್ತಿಯಾಗುವ ಶಾಖವು ನಮ್ಮ ದೇಹವನ್ನು ಬೆಚ್ಚಗಿಡುತ್ತದೆ, ಆಹಾರ ಪಚನಕ್ರಿಯೇಗೆ ಸಹಾಯ ಮಾಡುತ್ತದೆ, ರಕ್ತಸಂಚಲನ ಮಾಡಿಸುತ್ತದೆ. ಜೀವಕೋಶಗಳ ಮರು ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಒಟ್ಟಾರೆ ಒಂದು ಜೀವ ಜೀವಂತವಾಗಿರಲು ಕಾರಣ ಆ ಪರಮಾಣುವಿಗಿಂತ ಚಿಕ್ಕದಾಗಿ ಉತ್ಪದನೆಯಾಗುವ ಶಾಖ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಯೋಗ ಪ್ರಾಣಾಯಾಮದಲ್ಲಿ ಮೂಲಾಧಾರವನ್ನು ಜಾಗ್ರತಗೊಳಿಸಬೇಕು ಎಂದು ಮೇಲಿಂದಮೇಲೆ ಹೇಳುತ್ತಾರೆ.  

ಆ ಮೂಲಾಧಾರದಲ್ಲಿ ಹುಟ್ಟುವ ಆ ಶಾಖವು ಕಣ್ಣಿಗೆ ಕಾಣಿಸುವುದಂತು ಅಲ್ಲವೆ ಅಲ್ಲ ಎನ್ನುವದು ಗೊತ್ತು. ನಮ್ಮ ದೇಹದ ಎಲ್ಲ ಭಾಗಗಳನ್ನು ನಾವು ಮರು ಜೋಡಣೆ ಮಾಡಬಹುದು. ಕೈ, ಕಾಲು, ಮೆದುಳು, ಹೃದಯ,  ನರ, ಎಲುಬು ಪ್ರತೀಯೊಂದನ್ನು ಮತ್ತೆ ಜೋಡಿಸಿ ಮೊಗದೊಂದಿಷ್ಟು ದಿನ ಸಾಯುವ ಜೀವವನ್ನು ಬದುಕಿಸಿಬಿಡಬಹುದು. ಆದರೆ ನಮ್ಮೊಳಗಿನ ಶಾಖ ಉತ್ಪತ್ತಿಯನ್ನು ಮಾತ್ರ ಮತ್ತೆ ಉತ್ತೇಜನಗೊಳಿಸಿ ಅದು ಸಜೀವವಾಗಿಟ್ಟು ಜೀವ ಬದುಕುವಂತೆ ಮಾಡಲು ಯಾವ ವಿಜ್ಞಾನದಿಂದಲೂ ಸಾಧ್ಯವಾಗಲಿಲ್ಲ. ಹಾಗಾಗಿಯೇ ಇಂದಿಗೂ ಸಾವು ಹೇಗೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಅದರೊಟ್ಟಿಗೆ ಮನುಷ್ಯನ ಅಹಂಕಾರಕ್ಕೆ ಪೆಟ್ಟು ಕೊಟ್ಟಿದೆ.  

ಒಮ್ಮೆ ಶ್ರೀಕೃಷ್ಣಪರಮಾತ್ಮ ಮತ್ತು ರುಕ್ಮಿಣಿ ವಾಯುವಿಹಾರಕ್ಕೆ ಹೋಗುತ್ತಾರೆ. ಆಗ ಅವರ ತಲೆಯ ಮೇಲಿಂದ ಜೇನು ಹುಳುಗಳು  ಹಾರುವುದು ಕಾಣಿಸಿತು.  ಹಾಗೆ ಜೇನು ಹುಳುಗಳು ಒಯ್ಯುತ್ತಿದ್ದಾಗ ಹೂವಿನ ಮಕರಂದದ ಹನಿಯೊಂದು ರುಕ್ಮಿಣಿಯ ಕೈ ಮೇಲೆ ಬಿದ್ದುಬಿಟ್ಟಿತು. ಆಗ ರುಕ್ಮಿಣಿ ‘ಈ ಜೇನು ತುಪ್ಪವು ಅದೆಷ್ಟು ಮಧುರ. ಅದರ ರುಚಿಯ ಮುಂದೆ ಬೇರೆ ಯಾವ ಸಿಹಿಯೂ ಮಧುರವಲ್ಲ ಎಂದು ಹೊಗಳಿದಳು. ಅದಕ್ಕೆ ಕೃಷ್ಣನಿಗೆ ಸಣ್ಣ ಅಸೂಹೆ ಹುಟ್ಟಿತು. ತನ್ನ ಮಡದಿ ಪಕ್ಕದಲ್ಲಿರುವ ತನ್ನನ್ನು ಹೊಗಳುವುದು ಬಿಟ್ಟು ಆ ಜೇನು ಮಾಡುವ ತುಪ್ಪವನ್ನು ಹೊಗಳುತ್ತಾಳಲ್ಲ ಎಂದುಕೊಂಡ ಕೃಷ್ಣ ‘ಅದೇನು ಮಹಾ, ಮರದ ಕೊಂಬೆಗೆ ರೊಟ್ಟು ಕಟ್ಟಿ ಮಕರಂದ ತಂದು ಹಾಕಿದರೆ ಜೇನು ತುಪ್ಪವಾಗುತ್ತದೆ ಅದೇನು ಮಹಾ ಕೆಲಸವಲ್ಲ’ ಎಂದ. ಆಕೆಯೂ ಪಟ್ಟು ಬಿಡದೆ ಹಾಗಾದರೆ ನೀವು ಜೇನು ತಯಾರಿಸಿ ನನಗೆ ತಂದುಕೊಡಿ ಎಂದಳು. ಹೆಂಡತಿ ಅಷ್ಟು ಹೇಳಿದ ಮೇಲೆ ತಾನು ಸೋಲಬಾರದು ಎಂದು ಮರುದಿನದಿಂದಲೇ  ಮರದ ಕೊಂಬೆಯೊಂದಕ್ಕೆ ತಾನೇ ಜೇನಿನ ರೊಟ್ಟನ್ನು ಕಟ್ಟಿ ಹೂವಿನ ಮಕರಂದವನ್ನು ಸೇರಿಸಿ ಜೇನುಹುಳಗಳು ಏನೆಲ್ಲ ಪ್ರಕ್ರಿಯೇ ಮಾಡುತ್ತವೋ ಅದೆಲ್ಲವನ್ನು ಮಾಡಿದ. ಆರು ತಿಂಗಳಲ್ಲಿ ಜೇನು ತುಪ್ಪವೂ ಆಯಿತು. ಕೃಷ್ಣ ಆ ಜೇನನ್ನು ಕೊಯ್ದು ತಂದು ಮಡದಿಯ ಎದುರು ಇಟ್ಟ. ರುಕ್ಮಿಣಿ ಆ ತುಪ್ಪವನ್ನು ತಿಂದು ನಗಲಾರಂಭಿಸಿದಳು. ಯಾಕೆ ಇವಳು ನಗುತ್ತಿದ್ದಾಳೆ ಎಂದು ತಿಳಯಲು ಆ ತುಪ್ಪವನ್ನು ತಾನು ಬಾಯಲ್ಲಿಟ್ಟ. ಅದು ಜೇನು ತುಪ್ಪವಾಗಿರಲಿಲ್ಲ. ಕೇವಲ ಹೂವಿನ ಮಕರಂದವು ತುಪ್ಪದಂತೆ ಗಟ್ಟಿಯಾಗಿತ್ತು, ಸುವಾಸನೆ ಜೇನುತುಪ್ಪದಂತೆ ಆಗಿತ್ತಷ್ಟೆ. . ಜೇನು ತುಪ್ಪದ ಆ ಮಧುರ ಸಿಹಿಯನ್ನು ಕೃಷ್ಣನಿಗೆ ತರಲಾಗಿರಲಿಲ್ಲ. ಆಗ ರುಕ್ಷ್ಮಿಣಿಯ ಎದುರು ತಾನು ಸೋತೆ ಎಂದು ಕೃಷ್ಣನೇ ಒಪ್ಪಿಕೊಂಡನಂತೆ. ಅಂದರೆ ಕೆಲವೊಂದಷ್ಟು ಪ್ರಕೃತಿಗೆ ಮಾತ್ರ ಗೊತ್ತಿರುವ ಸಂಗತಿಗಳು ವಿಶ್ವದಲ್ಲಿದೆ. ಯಾವ ದೇವರಾಗಲಿ, ವಿಜ್ಞಾನಿಯಾಗಲಿ ಮರುಹುಟ್ಟು ಹಾಕಲು ಸಾಧ್ಯವಿಲ್ಲ.  

ವಿಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ನಿತ್ಯವೂ ಜೀವಕೋಶಗಳು ಸಾಯುತ್ತವೆ. ಸತ್ತ ಜೀವಕೋಶದ ಎರಡು ಪಟ್ಟು ಹುಟ್ಟುತ್ತವೆ. ಹುಟ್ಟು ಸಾವಿನ ಮಧ್ಯದಲ್ಲಿರುವ ಹೆಚ್ಚಿನ ಜೀವಕೋಶಗಳು ನಮ್ಮ ಚೇತನಕ್ಕೆ ಕಾರಣವಾಗಿವೆ. ನಾವು ಹೆಚ್ಚಿನ ಕೆಲಸಗಳನ್ನು, ಒತ್ತಡಗಳನ್ನು ದೇಹಕ್ಕೆ ನೀಡಿದಾಗ ಕೂಡ ಜೀವಕೋಶಗಳು ಅದೇ ಮಟ್ಟದಲ್ಲಿ ಸ್ಪಂದಿಸಿ ನಮ್ಮನ್ನು ಉತ್ತೇಜಿಸುತ್ತವೆ. ಯಾವಾಗ ಜೀವಕೋಶಗಳ ಹುಟ್ಟು ಕಡಿಮೆಯಗಿ ಸಾವು ಹೆಚ್ಚಾಗುತ್ತದೋ ನಮ್ಮ ಸಾವಿನ ದಿನ ಹತ್ತಿರ ಬಂತೆಂದು ಅರ್ಥ. ಹಾಗಿದ್ದರೆ ಒಂದು ಜೀವ ಜೀವಂತವಾಗಿದೆ ಎನ್ನುವದು ಕೇವಲ ಹೃದಯಕ್ಕೆ ಸಂಬಂಧಿಸಿದ್ದಲ್ಲ. ಮೂಲಾಧಾರದಲ್ಲಿರುವ ಅದೊಂದು ಶಾಖಕ್ಕೆ ಸಂಬಂಧೀಸಿದ್ದು. ಆ ಶಾಖಕ್ಕೆ ಇರುವ ಶಕ್ತಿ ಯಾವುದು ಎಂದು ವಿಜ್ಞಾನಿಗಳಿಗೆ ಇನ್ನು ಕಂಡು ಹಿಡಿಯಲಾಗಿಲ್ಲ. ಆದರೆ ನಮ್ಮ ಹಿಂದೂ ಋಷಿಮುನಿಗಳು ತಿಳಿಸಿಕೊಟ್ಟಿದ್ದು, ಪುರಾಣಗಳು ಮಹಾನ್ ಗ್ರಂಥಗಳು ಹೇಳಿದ್ದು ಅದು ಬ್ರಹ್ಮ ಎಂದು. ಆ ಬ್ರಹ್ಮನಿಗೆ ವೈಜ್ಞಾನಿಕ ಹೆಸರೊದು ಇಟ್ಟರೆ  ಕಲಿಯುಗದಲ್ಲಿ ಬಹಳ ಜನ ಇದು ಸರಿ ಎಂದು ಒಪ್ಪುತ್ತಾರೆ. ಆದರೆ ಬ್ರಹ್ಮ ಎನ್ನುವ ಹೆಸರು ದೇವರ ನಾಮ ಎನ್ನುವ ಕಾರಣಕ್ಕೆ ಅದೆಷ್ಟೋ ಜನರಿಗೆ ಇದು ಇಷ್ಟವಾಗುವುದಲಿಲ್ಲ.  

ಮೊನ್ನೆ ತಾನೆ ಚಂದ್ರಯಾನ-3 ನಭಕ್ಕೆ ಸೇರಿಸಲಾಯಿತು. ಅದರ ಮುನ್ನಾದಿನ ತಿರುಪತಿಗೆ ಮಾದರಿ  ಉಪಗ್ರಹ ಇಟ್ಟು ಪೂಜೆ ನಡೆಸಿದರು. ಈ ಕಾರಣಕ್ಕೆ ವಿಜ್ಞಾನಿಗಳಿಗೆ ತಮ್ಮ ಸೃಷ್ಟಿಯ ಮೇಲೆ ನಂಬಿಕೆ ಇಲ್ಲ ಅಂದರೆ ಹೇಗೆ? ಬಾನಲ್ಲಿ ಅದೇನಾದರೂ ಹಾಳಾದರೆ ಅಂದರೆ ಚಂದ್ರಯಾನ-2ದಲ್ಲಿ ಆದಂತೆ ಅವಘಡವಾದರೆ ದೇವರು ಹೋಗಿ ಸರಿ ಮಾಡುತ್ತಾನೆಯೇ ಎನ್ನುವ ಪ್ರಶ್ನೆ ಎತ್ತಿದ್ದಾರೆ. ಆದರೆ ಅಲ್ಪಜ್ಞಾನಿ ಮನುಷ್ಯರು ಸೌರಮಂಡಲವನ್ನು ಎಲ್ಲೋ ತೃಣಮಾತ್ರ ಮನುಷ್ಯ ಅಥವಾ ವಿಜ್ಞಾನಿ ಕಂಡುಕೊಂಡಿರುವುದು ಎಂದು ಅರ್ಥಮಾಡಿಕೊಂಡಿಲ್ಲ.  ತನ್ನೊಳಗಿರುವ ತನ್ನನ್ನು ಜೀವಂತವಾಗಿ ಇಟ್ಟಿರುವ ಮೂಲಾಧಾರದಲ್ಲಿ ಜಾಗ್ರತಸ್ಥೀತಿಯಲ್ಲಿ ಪ್ರತೀಕ್ಷಣವೂ ಶಾಖವನ್ನು ಉತ್ಪಾದಿಸುವ ಶಕ್ತಿಯ ಮೂಲವನ್ನು ಕಂಡುಕೊಂಡಿಲ್ಲ. ಹಾಗಿದ್ದಾಗ ಮನುಷ್ಯನ ಮಟ್ಟಕ್ಕೆ  ತುಂಬಾ ದೊಡ್ಡ ಸಾಧನೆಯಾದರೂ ಬ್ರಹ್ಮ ಸೃಷ್ಟಿಯ ಆಳಕ್ಕೆ ಇಳಿದರೆ ಮನುಷ್ಯ ಮಾಡುವ ಎಲ್ಲವೂ ಇರುವೆಗೆ ಸಮಾನ.  ಹಾಗಿರುವಾಗ ತಾನು ಸೃಷ್ಟಿಸಿದ ಉಪಕರಣವನ್ನು ಮತ್ತಿನ್ನೇನನ್ನೋ ಆ ಭಗವಂತನಲ್ಲಿ ನೀನೇ ದಡಸೇರಿಸು. ನಿನ್ನ ನಿರ್ಧೇಶನ ಇರಲಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ನಂಬಿಕೆ ಎನ್ನುವದು ಕೇವಲ ಆಡಂಭರಕ್ಕೆ ಮೌಢ್ಯಕ್ಕೆ ಅಲ್ಲ. ಕಂಡಕಂಡದ್ದೆಲ್ಲ ಮೌಢ್ಯ ಎನ್ನುವುದು ಸರಿಯಲ್ಲ. ನಮ್ಮನ್ನು ನಾವು ಕಂಡುಕೊಂಡರೆ ಬ್ರಹ್ಮ ಕಾಣದಿರುವನೆ  ಎನ್ನುವ ಮಾತು  ಕೂಡ ಮನುಷ್ಯ ತನ್ನೊಳಗಿನ ಶಾಖವು ಹುಟ್ಟಿದ್ದು ಎಲ್ಲಿಂದ ಹುಟ್ಟಿದ್ದು ಎಂದು ಹುಡುಕು ಎನ್ನುವ ಅರ್ಥವನ್ನೇ ನೀಡುವುದು. 

- ಶುಭಾ ಗಿರಣಿಮನಿ 

- * * * -