ಶ್ರೇಷ್ಠ ಗುರಿ, ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ: ಮಹೇಶ ಪೋತದಾರ

ಶ್ರೇಷ್ಠ ಗುರಿ, ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ: ಮಹೇಶ ಪೋತದಾರ   A noble goal can be achieved with hard work: Mahesh Potadara

                                ತಾಳಿಕೋಟಿ 22:  ಸರ್ಕಾರ ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರಲು ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ಜೀವನಕ್ಕೆ ಶ್ರೇಷ್ಠ ಗುರಿ ಅದಕ್ಕಾಗಿ ಕಠಿಣ ಪರಿಶ್ರಮ ವಹಿಸಿದರೆ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು. ಶುಕ್ರವಾರ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                                 ವಸತಿ ನಿಲಯಗಳ ವ್ಯವಸ್ಥೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲಿಕ್ಕಾಗಿ ಈ ವಿಶಿಷ್ಟ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು ಇದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಸಹಾಯಕ ನಿರ್ದೇಶಕಿ ಬಿ.ಜಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿ ಈ ವಿನೂತನ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ, ಇದಕ್ಕಾಗಿ ಪ್ರತಿ ತಾಲೂಕಿಗೆ ಮೆಂಟರ್ ಳನ್ನು ನೇಮಕ ಮಾಡಲಾಗಿದೆ ಇಂತಹ ವಿನೂತನ ಕಾರ್ಯಕ್ರಮ ನೀಡಿದ ಮಾನ್ಯ ಜಿಲ್ಲಾಧಿಕಾರಿ ಹಾಗೂ ಉಪನಿರ್ದೇಶಕರಿಗೆ ಅಭಿನಂದಿಸುತ್ತೇನೆ.

                                ಇಲ್ಲಿಯ ನಿಲಯದ ಪಾಲಕರಾದ ಎಸ್ ಎಂ ಕಲಬುರ್ಗಿಯವರು ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಇಂತಹ ನಿಲಯ ಪಾಲಕರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು. ಉಪನ್ಯಾಸಕ ಮಹೇಶ ಹಡಪದ ಹಾಗೂ ದಯಾನಂದ ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ( ಐ.ಡಿ. ಕಾರ್ಡ)ನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮ ನಂತರ ನಿಲಯಗಳ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ವಾಸ್ತವ್ಯದ ಮರುದಿನ ಬೆಳಗಿನ ಜಾವ ಯೋಗ ಪಟು ಉಪಾಧ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಕ್ಕಳಿಗೆ ಯೋಗ ಕಾರ್ಯಕ್ರಮ ನಡೆಸಲಾಯಿತು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

                          ಕಾರ್ಯಕ್ರಮದಲ್ಲಿ ಮೆಂಟರ್ ಗೀರೀಶ ಅಲ್ಕೋಡೆ, ಪುರಸಭೆ ಕಂದಾಯ ನೀರೀಕ್ಷಕ ಸುರೇಶ ಅಮರಣ್ಣವರ, ಪ್ರಾಚಾರ್ಯ ಚಂದ್ರಶೇಖರ ಸಜ್ಜನ, ದಲಿತ ಮುಖಂಡ ನಾಗೇಶ ಕಟ್ಟಿಮನಿ, ಬಸವರಾಜ ಕಾಮಗೊಂಡ, ನಿಲಯ ಪಾಲಕರಾದ ಎಸ್‌.ಜಿ.ವಾಲಿಕಾರ,ಎಸ್‌.ಎನ್‌.ಮಲ್ಲಾಡೆಎನ್‌.ವಿ.ಕೋರಿ, ಎಸ್‌.ಎಂ.ಕಲಬುರ್ಗಿ, ಎಸ್‌.ಎಂ.ಬಾಸಗಿ, ಎನ್‌.ಎಸ್‌.ಗುರಗುಂಟಿ, ಎಂ.ಎಸ್‌.ತಾಳಿಕೋಟಿ, ವಾಣಿ ಹನಗಂಡಿ, ರೇಣುಕಾ ಪಾಟೀಲ, ಶ್ರೀಕಾಂತ ಸಲಗರ, ಸಿಬ್ಬಂದಿಗಳಾದ ಮಂಜುನಾಥ ನರಸಣಗಿ,ನವೀನ ಇಜೇರಿ, ಶ್ರೀನಿವಾಸ್ ಅಂಗಡಿ, ರಾಮನಗೌಡ ಬಂಟನೂರ ಹಾಗೂ ವಿದ್ಯಾರ್ಥಿಗಳು ಇದ್ದರು.