ಸಂಗೀತದ ಸ್ವರ ಪಂಡಿತ

ವ್ಯಕ್ತಿಯೊಬ್ಬ ಸಾಧಕ ಎನಿಸಿಕೊಳ್ಳಬೇಕಾದರೆ ಅದರ ಹಿಂದಿನ ಪರಿಶ್ರಮ ಊಹಿಸಲೂ ಅಸಾಧ್ಯವಾದುದು. ಹಾಗೆಯೇ ಕಷ್ಟಗಳನ್ನೇ ಬದುಕಿನ ಶ್ರುತಿಯಾಗಿಸಿದ ಪದ್ಮಶ್ರೀ ಪಂಡಿತ ಡಾ.ವೆಂಕಟೇಶಕುಮಾರ ಅವರು ಕಳೆದ ನಾಲ್ಕು ದಶಕಗಳಿಂದ ಸಂಗೀತ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ದಾಸರಪದಗಳು, ಭಕ್ತಿಗೀತೆಗಳು, ಬಸವಣ್ಣ, ಅಕ್ಕಮಹಾದೇವಿ, ದೇವರದಾಸಿಮಯ್ಯ, ಅಲ್ಲಮಪ್ರಭು ವಚನಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಶೃದ್ಧೆ, ಪರಿಶ್ರಮದಿಂದ ಕಲಿತು ಸಂಗೀತದಲ್ಲಿ ಸಾಧನೆಯ ಶಿಖರಕ್ಕೆ ಏರಿದವರು ಡಾ.ವೆಂಕಟೇಶಕುಮಾರರು.  

ಪಂಡಿತ ಎಂ.ವೆಂಕಟೇಶಕುಮಾರರು ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ 1953ರ ಜುಲೈ 1ರಂದು ಜನಿಸಿದರು. ತಂದೆ ಹುಲಿಯಪ್ಪ, ತಾಯಿ ಪಾರ್ವತಮ್ಮ. ತಂದೆ ಹುಲಿಯಪ್ಪ ಜಾನಪದ ಕಲಾವಿದರು ಮತ್ತು ಬಯಲಾಟದಲ್ಲಿ ಭಾಗವತರಾಗಿ ಕೆಲಸ ಮಾಡುತ್ತಿದ್ದರು. ಮನೆಯ ತುಂಬ ಸಂಗೀತದ ವಾತಾವರಣವಿತ್ತು. ಪಾರ್ವತಮ್ಮ ಕೂಡ ಸಂಗೀತವನ್ನು ಬಹಳ ಆಸ್ವಾದಿಸುತ್ತಿದ್ದರು. ಮನೆತನವೇ ಲಲಿತ ಕಲೆಗಳಲ್ಲಿ ಆಸಕ್ತಿ ತಳೆದಿರುವುದರಿಂದ ಸಹಜವಾಗಿ ಅವರಿಗೂ ಸಂಗೀತದ ಗೀಳು ಹತ್ತಿಕೊಂಡಿತು. ಹೀಗಾಗಿ 5ನೇ ತರಗತಿಯವರೆಗೆ ಮಾತ್ರ ಓದಿದ ಅವರನ್ನು ಸೋದರ ಮಾವ ಬೆಳಗಲ್ಲಾ ವೀರಣ್ಣನವರು 1968ರಲ್ಲಿ ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದರು. ಅವರು 12 ವರ್ಷಗಳ ಕಲಿಕೆಗಾಗಿ ಕೇವಲ 65ರೂ ಫೀ ಕಟ್ಟಿದ್ದರು. ಶಾಸ್ತ್ರೀಯ ಸಂಗೀತ ಸರಳ, ಜಂಟಿ, ಅಲಂಕಾರ, ಸ್ವರಗೀತೆ. ಲಕ್ಷಣ ಗೀತೆಗಳನ್ನು ಕಲಿಯುವುದರಲ್ಲಿ 6 ವರ್ಷಗಳನ್ನೇ ಕಳೆದಿದ್ದರು. ಹೀಗೆಯೇ ಛೋಟಾ ಖ್ಯಾಲ್, ಬಂದೀಶ್‌ಗಳನ್ನೊಳಗೊಂಡ ರಾಗಗಳನ್ನು ವೆಂಕಟೇಶ ಕುಮಾರ ಹಾಡಲಾರಂಭಿಸಿದರು. ನಂತರ ಅವರು ಅಖಿಲಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.  

ಅವರು ನಿರಂತರ 12 ವರ್ಷ ಅಭ್ಯಾಸದ ಬಳಿಕ ಗದಗದ ವಿಜಯ ಮಹಾಂತೇಶ ಆರ್ಟ್ಸ್‌ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಗೆ ಸೇರಿದರು. ಅಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿ, ಉಡುಪಿಯ ಮುಕುಂದ ಕೃಪಾದಲ್ಲಿ ಎರಡು ವರ್ಷಗಳವರೆಗೆ ಸಂಗೀತ ತರಬೇತಿಯನ್ನು ನೀಡಿದರು. ನಂತರ ಪಂಡಿತ ವೆಂಕಟೇಶಕುಮಾರರು ಧಾರವಾಡದ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸವನ್ನು ಆರಂಭಿಸಿದರು. ಅಂತಿಮವಾಗಿ 1993ರಲ್ಲಿ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಲಲಿತ ಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ಅವರು 2015ರವರೆಗೆ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಪಂಡಿತ ವೆಂಕಟೇಶ ಕುಮಾರರು ಲಕ್ಷ್ಮೀದೇವಿ ಅವರನ್ನು ಮದುವೆಯಾದರು. ಅವರಿಗೆ ಮೂವರು ಮಕ್ಕಳು. ಸಿದ್ಧಲಿಂಗೇಶ, ಪಂಚಾಕ್ಷರಿ ಹಾಗೂ ನೀರಜ. ಮೂವರೂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

1979ರಲ್ಲಿ ಅವರ ಧಾರವಾಡದ ಆಕಾಶವಾಣಿಯಲ್ಲಿ ಹಾಡಲು ಪ್ರಾರಂಭಿಸಿದರು. ನಂತರದ ವರ್ಷಗಳಲ್ಲಿ ಅವರ ಜನಪ್ರಿಯತೆ ಹೆಚ್ಚಾಯಿತು. 1988ರಿಂದ ಆಕಾಶವಾಣಿಯ ಎ ದರ್ಜೆಯ ಕಲಾವಿದರಾಗಿ ಹೊರಹೊಮ್ಮಿದರು. ಅವರ ಜೀವನದ ಅತಿ ಮುಖ್ಯ ಘಟನೆಯೆಂದರೆ, ಮಹಾರಾಷ್ಟ್ರ ಸರ್ಕಾರವು ಪಂಡಿತ ಭೀಮಸೇನ್ ಜೋಶಿಯವರಿಗೆ ಪ್ರಶಸ್ತಿ ಸಮಾರಂಭವನ್ನು ಏರಿ​‍್ಡಸಿತ್ತು. ಆ ಸಮಾರಂಭದಲ್ಲಿ ಪಂಡಿತ ವೆಂಕಟೇಶ ಕುಮಾರರು ಹಾಜರಾಗಿದ್ದರು. ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಳ್ಳುವವರು ಹಾಡುವಂತಿರಲಿಲ್ಲ. ಅದಕ್ಕಾಗಿ ಗಾಯಕ ರಶೀದ್‌ಖಾನ್‌ರವರನ್ನು ಹಾಡುವಂತೆ ಸೂಚಿಸಲಾಯಿತು. ಅವರು ವಿದೇಶದಲ್ಲಿದ್ದ ಕಾರಣ, ಸಮಾರಂಭದಲ್ಲಿ ಹಾಜರಿರಲಿಲ್ಲ. ಹೀಗಾಗಿ ಪಂಡಿತ ವೆಂಕಟೇಶಕುಮಾರವರನ್ನು ಕರೆದು ಹಾಡಿಸಿದರು. ಅವರು ಹಾಡಿದು ಹಾಡು ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತು. ಅಂದಿನಿಂದ ಅವರ ಸಂಗೀತ ಪಯಣ ಅದ್ಭುತವಾಗಿ ಸಾಗಿತು. ‘ತೊರೆದು ಜೀವಿಸಬಹುದೆ?, ‘ನಂಬಿದೆ ನಿನ್ನ ಪಾದ’, ‘ಒಂದು ಬಾರಿ ಸ್ಮರಣೆ  ಸಾಲದೆ’ ಮುಂತಾದ ಹಾಡುಗಳ ಮೂಲಕ ಅವರು ಪ್ರಸಿದ್ಧಿ ಪಡೆದರು. ಯಾವುದೇ ರಾಗವಿರಲಿ, ಬಂದಿಶ್‌ವಿರಲಿ, ದಾಸರಪದ- ವಚನಗಳಿರಲಿ, ಅವರ ಮಧುರಕಂಠದಿಂದ ಬಂದಾಗ ಹೊಸರೂಪವನ್ನು ಪಡೆದಿರುತ್ತದೆ. ಅವರ ಸರಳವಾದ ವ್ಯಕ್ತಿತ್ವ ಮತ್ತು ಅಪ್ಪಟ ದೇಶಿ ಸಂಗೀತದಿಂದ ಆಕರ್ಷಿತರಾದ ಶೋತೃಗಳಲ್ಲಿ ಸಂಗೀತಜ್ಞರು, ಸಂಗೀತಗಾರರು, ಸಂಗೀತ ವಿದ್ಯಾರ್ಥಿಗಳು ಅಲ್ಲದೇ ಕೇವಲ ಆನಂದಕ್ಕಾಗಿ ಸಂಗೀತ ಕೇಳುವ ರಸಿಕರ ಬಳಗವೇ ಇದೆ.  

“ರಾಗಗಳು ನೂರಾರು ಇದ್ದರೂ ನಾನು ಕೆಲವೇ ರಾಗಗಳನ್ನು ಬಹುವಾಗಿ ಪ್ರೀತಿಸುತ್ತೇನೆ. ಅವುಗಳನ್ನೇ ಹಾಡ್ತೇನೆ. ಬೆಳಗ್ಗಿನ ರಾಗಗಳಾದ ಅಲಿಯಾ ಬಿಲಾವಲ್, ಭೈರವ್, ತೋಡಿ, ಕೋಮಲ ರಿಷಭ್ ಅಸಾವರಿ, ಮಧ್ಯಾಹ್ನದ ರಾಗಗಳಾದ ಭೀಮಪಲಾಸಿ, ಬೃಂದಾವನಿ ಸಾರಂಗ, ಗೌಡ ಸಾರಂಗ ಹಾಗೂ ಸಾಯಂಕಾಲದ ಪೂರಿಯಾ, ಧನಶ್ರೀ, ಮಾರ್ವ, ಇಳಿಸಂಜೆಯ ರಾಗಗಳಾದ ಯಮನ್, ಕೇದಾರ, ಪಹಾಡಿ, ಶಂಕರ, ರಾತ್ರಿಯ ರಾಗಗಳಾದ ಬಿಹಾಗ್, ದರ್ಬಾರಿ ಕಾನಡ, ಶಹನಾ ಇವುಗಳನ್ನು ಹಾಡ್ತೀನಿ, ಜೊತೆಗೆ ದೇವರನಾಮ, ವಚನ, ಅಭಂಗಗಳನ್ನೂ ಹಾಡ್ತೀನಿ, ಕೇಳುಗರಿಗೆ ವೆರೈಟಿ ಕೊಟ್ಟರೆ ಮತ್ತಷ್ಟು ಇಷ್ಟವಾಗುತ್ತದೆ ಎಂಬುದು ಇದಕ್ಕೆ ಕಾರಣ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶ್ರದ್ಧೆ, ಪರಿಶ್ರಮದಿಂದ ಕಲಿತು ಸಂಗೀತದಲ್ಲಿ ಸಾಧನೆಯ ಶಿಖರಕ್ಕೆ ಏರಿದ ಪಂಡಿತ ವೆಂಕಟೇಶಕುಮಾರರಿಗೆ ಇಂದಿನ ಮಕ್ಕಳ ಸಂಗೀತ ಕಲಿಕೆಯ ಬಗ್ಗೆ ಅಸಮಾಧಾನವಿದೆ. ‘ಇಂದಿನ ಮಕ್ಕಳು ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಡಬೇಕು, ಪ್ರಚಾರಕ್ಕಲ್ಲ’ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.  

ಕಿರಾನ ಫರಾಣಿಯ ಪ್ರಸಿದ್ಧ ಗಾಯಕ ಪದ್ಮಶ್ರೀ ಪಂ.ವೆಂಕಟೇಶಕುಮಾರ ಅವರ ಬದುಕು-ಸ್ವರ ಸಾಧನೆಯ ಕುರಿತ ‘ನಾದದ ನವನೀತ ಪಂಡಿತ ವೆಂಕಟೇಶ ಕುಮಾರ’ ಎಂಬ 43 ನಿಮಿಷದ ಸಾಕ್ಷಚಿತ್ರವನ್ನು ಸರ್ಕಾರವು ರಾಷ್ಟ್ರ​‍್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಗೀರೀಶ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಹೊರತಂದಿದೆ. ಈ ಸಾಕ್ಷಚಿತ್ರವು 68ನೇ ರಾಷ್ಟ್ರೀಯ ಚಲನಚಿತ್ರೋತ್ಸವದ ಚಲನ-ಚಿತ್ರಯೇತರ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ರಜತ ಕಮಲ ಗೌರವಕ್ಕೆ ಭಾಜನವಾಗಿದೆ. ಸಾಕ್ಷಚಿತ್ರದಲ್ಲಿ ಸಾಧಕರ ಬದುಕಿನ ಹಂತಗಳನ್ನು ವಿದ್ಯಾರ್ಥಿಯಾಗಿ, ಗೃಹಸ್ಥರಾಗಿ, ಅಧ್ಯಾಪಕರಾಗಿ ಮತ್ತು ಗಾಯಕರಾಗಿ ಎಂಬ ನಾಲ್ಕು ವಿಭಾಗದಲ್ಲಿ ವೀಕ್ಷಕರೆದುರು ತೆರೆದಿಡಲಾಗಿದೆ. ಪ್ರತಿ ವಿಭಾಗವು ವಚನಗಳ ಸಾಲಿನಿಂದ ಪ್ರಾರಂಭಗೊಳ್ಳುವುದು ವಿಶೇಷ. ಅವರ ಗಾಯನ ಮಾತ್ರ ತಿಳಿದಿದ್ದ ನಮಗೆ ಅವರ ಸಂಸಾರಿಕ ಬದುಕು, ಸಿನಿಮಾ ನೋಡುವ ಹವ್ಯಾಸ ಸೇರಿದಂತೆ ಹಲವು ಸ್ವಾರಸ್ಯಗಳು ತಿಳಿಯುತ್ತವೆ. ಅವರ ಪತ್ನಿ ಲಕ್ಷ್ಮೀದೇವಿಯವರು ‘ಮದುವೆಯಾದ ಆರಂಭದಲ್ಲಿ ನಮ್ಮಲ್ಲಿ ಎರಡೇ ಪಾತ್ರೆಗಳಿದ್ದವು. ಒಂದು ಸಾಂಬಾರಿಗೆ, ಇನ್ನೊಂದು ಅನ್ನಕ್ಕೆ’ ಎಂದು ಹೇಳಿರುವುದು ಪಂ.ವೆಂಕಟೇಶಕುಮಾರವರ ಕಷ್ಟದ ಜೀವನ ಹೇಗಿತ್ತು ಎನ್ನುವುದಕ್ಕೆ ಒಂದು ಸಾಕ್ಷಿಯಾಗುತ್ತದೆ. ಸಾಕ್ಷ ಚಿತ್ರದಲ್ಲಿ ಗೀರೀಶ ಕರ್ನಾಡ, ತಬಲಾ ಕಲಾವಿದ ರವೀಂದ್ರ ಯಾವಗಲ್, ಸಂಗೀತ ವಿಮರ್ಶಕ ಎನ್‌.ಮನುಚಕ್ರವರ್ತಿ, ಸಿತಾರ ಕಲಾವಿದ ಡಾ.ಮಲ್ಲಿಕಾರ್ಜುನ ತರ್ಲಗಟ್ಟಿ ಸೇರಿದಂತೆ ಅನೇಕ ವಿದ್ವಾಂಸರ ಅಭಿಪ್ರಾಯಗಳಿವೆ. 

ಪ್ರಪಂಚದಾದ್ಯಂತ ಎಲ್ಲಾ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಗೂ ಸಂಗೀತ ಉತ್ಸವಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅವರು ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ವತ್ಸಲಾ ಭೀಮಸೇನ್ ಜೋಶಿ ಪ್ರಶಸ್ತಿ, ಕೃಷ್ಣ ಹಾನಗಲ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ, ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ, ಬಸವ ಶ್ರೀ ಪುರಸ್ಕಾರ, ವಚನ ಸಾಹಿತ್ಯ ಶ್ರೀ ಪ್ರಶಸ್ತಿ, ಲಂಡನ್ ದರ್ಬಾರ ಉತ್ಸವದ ಸಂಭ್ರಮ, ಸ್ವರ ಯೋಗಿನಿ ಪ್ರಭಾ ಅತ್ರೆ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಅಲ್ಲದೇ ಪಂ.ವೆಂಕಟೇಶಕುಮಾರರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಅವರು ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಗೆ ಸೂಚಿಸಲಾದ ಸಂಗೀತದ ಪಠ್ಯಪುಸ್ತಕವನ್ನು ರಚಿಸಿರುವರು.  

“ನನ್ನ ಸಂಗೀತ ಯಶಸ್ಸಿಗೆ, ಸಾಧನೆಗೆ ಪತ್ನಿ ಲಕ್ಷ್ಮೀದೇವಿ ಕೊಡುಗೆ ಬಹಳ ದೊಡ್ಡದು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಪುಟ್ಟರಾಜ ಗವಾಯಿಗಳ ಕೃಪಾಕಟಾಕ್ಷದಿಂದಲೇ ನಾನು ಈ ಮಟ್ಟಕ್ಕೆ ಬೆಳೆದೆ. ನನ್ನನ್ನು ಗಾಯಕರನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಧಾರವಾಡಕ್ಕೆ ನಾನು ಋಣಿಯಾಗಿದ್ದೇನೆ”. ಎಂದು ವಿನಮ್ರವಾಗಿ ಹೇಳುತ್ತಾರೆ ಪಂ.ವೆಂಕಟೇಶಕುಮಾರರು. ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧಕರ ಸಾಲಿನಲ್ಲಿ ನಿಲ್ಲುವ ಅಪರೂಪದ ಸಾಧಕರು ಪಂಡಿತ ಡಾ.ವೆಂಕಟೇಶಕುಮಾರರು. ಅವರ ನೂರಾರು ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಸಾರ್ಥಕತೆ ಎಂದರೆ ಇದೇ ಅಲ್ಲವೇ. ಬಿಳಿಯ ಸಾದಾ ಜುಬ್ಬಾ ಪೈಜಾಮಾದ ಪಂ.ವೇಕಟೇಶಕುಮಾರರು ಅಪಾರ ಸಾಧನೆ ಮಾಡಿದ್ದರೂ, ಸಜ್ಜನಿಕೆಯ ಮಹಾಗುಣವನ್ನು ತಮ್ಮ ಜೊತೆಗಿರಿಸಿಕೊಂಡು ಇಡೀ ನಾಡಿಗೆ ಪ್ರಿಯರಾಗಿದ್ದಾರೆ. ಸಂಪರ್ಕಿಸಿ : 9449761644. 

- ಸುರೇಶ ಗುದಗನವರ,

ಧಾರವಾಡ 

- * * * -