ಪಡಿತರ ಅಂಗಡಿ ಲೈಸನ್ಸ್‌ ಪಡೆದವರ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸಲು ಕಾನೂನು ತರಬೇಕು: ರಾಜ್ಯಾಧ್ಯಕ್ಷ ಕೃಷ್ಣ ಡಿ. ನಾಯ್ಕ ಆಗ್ರಹ

ಪಡಿತರ ಅಂಗಡಿ ಲೈಸನ್ಸ್‌ ಪಡೆದವರ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸಲು ಕಾನೂನು ತರಬೇಕು: ರಾಜ್ಯಾಧ್ಯಕ್ಷ ಕೃಷ್ಣ ಡಿ. ನಾಯ್ಕ ಆಗ್ರಹ A law should be brought to extend the license to the heirs of those who have obtained ration shop li

ಲೋಕದರ್ಶನ ವರದಿ 

ಮುಂಡಗೋಡ 15: ಪಡಿತರ ಅಂಗಡಿ ಲೈಸನ್ಸ್‌ ಪಡೆದವರು 65 ವರ್ಷ ಮೇಲ್ಪಟ್ಟು ನಿಧನರಾದಲ್ಲಿ ಅವರ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸುವಂತೆ ಸರ್ಕಾರ ತಕ್ಷಣ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೃಷ್ಣ ಡಿ. ನಾಯ್ಕ ಆಗ್ರಹಿಸಿದರು.ಪಟ್ಟಣದ ಪರೀವೀಕ್ಷಣಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೆಂಗಳೂರು ಘಟಕದ ಪದಾಧಿಕಾರಿಗಳು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ರಾಜ್ಯದ ಪಕ್ಕದ ರಾಜ್ಯಗಳಲ್ಲಿ ಪಡಿತರ ಅಂಗಡಿದಾರರಿಗೆ ಪ್ರತಿಕ್ವಿಂಟಲ್‌ಗೆ ?250ರಿಂದ ?300ರವರೆಗೆ ಕಮೀಶನ್ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕೇವಲ ?150 ಕಮೀಶನ್ ನೀಡಲಾಗುತ್ತಿದ್ದು, ಇದು ಲೇಬರ್ ಚಾರ್ಜ್‌, ಕಂಪ್ಯೂಟರ್ ನಿರ್ವಹಣೆ, ಮೊಬೈಲ್ ರೀಚಾರ್ಜ್‌ ಹಾಗೂ ಇತರೆ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು ಸಾಲುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ?250 ಕಮೀಶನ್ ನೀಡಬೇಕು ಹಾಗೂ ಪ್ರತಿ ತಿಂಗಳು ಕಮೀಶನ್ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಆನ್‌ಲೈನ್ ಹಾಗೂ ಬಯೋಮೆಟ್ರಿಕ್ ತಾಂತ್ರಿಕ ತೊಂದರೆಗಳು, ಲೈಸನ್ಸ್‌ ಸಮಸ್ಯೆಗಳು ಮತ್ತು ಆರೋಗ್ಯ ವಿಮೆ ಸೌಲಭ್ಯ ಕೊರತೆ ಕುರಿತೂ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.ಸಂಘದ ಕೋಶಾಧ್ಯಕ್ಷ ಡಿ.ಜಿ. ಶಿವಾನಂದಪ್ಪ ಮಾತನಾಡಿ, “ನೂರಕ್ಕೆ ನೂರು ಕಮೀಶನ್ ನೀಡಲಾಗಿದೆ ಎಂಬ ಮಾಹಿತಿ ಬರುತ್ತಿದ್ದರೂ, ಯಾವ ತಿಂಗಳಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಹಾಗೂ ಲೆಕ್ಕಾಚಾರ ಹೇಗೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ.  

ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ಸಿಗದ ಕಾರಣ ಸದಸ್ಯರಲ್ಲಿ ಗೊಂದಲ ಉಂಟಾಗಿದೆ,” ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ರಾಮಚಂದ್ರ ಮಾತನಾಡಿ, ಕಳೆದ ನಾಲ್ಕೂವರೆ ದಶಕಗಳಿಂದ ಪಡಿತರ ವಿತರಕರು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಹೋರಾಟದ ಫಲವಾಗಿ ಕಮೀಶನ್ ?30, ?35ರಿಂದ ?150ಕ್ಕೆ ಹೆಚ್ಚಾಗಿದೆ. “ಒನ್ ನೇಷನ್ ಒನ್ ರೇಷನ್ ಕಾರ್ಡ” ಯೋಜನೆಯಂತೆ ದೇಶಾದ್ಯಂತ ಒಂದೇ ರೀತಿಯ ಕಮೀಶನ್ ನಿಗದಿ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಹೇಳಿದರು.1992ರಲ್ಲಿ ಜಾರಿಯಲ್ಲಿದ್ದ ನಿಯಮದ ಪ್ರಕಾರ ಪಡಿತರ ಅಂಗಡಿ ಲೈಸನ್ಸ್‌ ಪಡೆದವರು ನಿಧನರಾದರೆ ಅವರ ವಾರಸುದಾರರಿಗೆ ಲೈಸನ್ಸ್‌ ನೀಡಲಾಗುತ್ತಿತ್ತು.  

ಆದರೆ 2016ರಲ್ಲಿ ತಿದ್ದುಪಡಿ ಮಾಡಿ 65 ವರ್ಷ ಮೇಲ್ಪಟ್ಟವರು ನಿಧನರಾದಲ್ಲಿ ವಾರಸುದಾರರಿಗೆ ಲೈಸನ್ಸ್‌ ನೀಡಬಾರದು ಎಂದು ಆದೇಶಿಸಲಾಗಿದೆ. ಈ ತಿದ್ದುಪಡಿಯನ್ನು ರದ್ದುಪಡಿಸಿ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿ ತಿಂಗಳು ಕಮೀಶನ್ ನೀಡಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಎರಡು ತಿಂಗಳಿಗೆ ಒಮ್ಮೆ ಕಮೀಶನ್ ಬಿಡುಗಡೆ ಮಾಡಬೇಕು ಎಂದರು.ಕಾರ್ಯಕ್ರಮದ ಸ್ವಾಗತವನ್ನು ರಾಜ್ಯ ಪಡಿತರ ಕ್ಷೇಮಾಭಿವೃದ್ಧಿ ನಿರ್ದೇಶಕ ಸಿ.ಕೆ. ಅಶೋಕ (ಮುಂಡಗೋಡ) ನೆರವೇರಿಸಿದರು. ಡಿ.ಎಂ. ಹಾಲಸ್ವಾಮಿ, ಅಬ್ದುಲ್ ರಜಾಕ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಆರ್‌. ಡೋರಿ, ತಹಶೀಲ್ದಾರ ಎನ್‌.ಎಂ. ತಿಪ್ಪೇಸ್ವಾಮಿ, ರಾಜುಗೊಂಡಿ, ಟಿ.ಎನ್‌. ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.