ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಂತ ಸಮಾಜ: ನ್ಯಾಯಾಧೀಶೆ ರೂಪಾ ಚಿನಿವರ

ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಂತ ಸಮಾಜ: ನ್ಯಾಯಾಧೀಶೆ ರೂಪಾ ಚಿನಿವರ  A healthy society through the consumption of nutritious food: Judge Roopa Chinivara

ಲೋಕದರ್ಶನ ವರದಿ 

ಕಾಗವಾಡ 9: ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಆಧಾರವಾಗಿದ್ದು, ಗರ್ಭಿಣಿಯರು ಸೇವಿಸುವ ಪೌಷ್ಟಿಕ ಆಹಾರದಿಂದ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ ಎಂದು ನ್ಯಾಯಾಧೀಶೆ ರೂಪಾ ಚಿನಿವರ ಹೇಳಿದರು.  

ತಾಲೂಕಿನ ಮಂಗಸೂಳಿ ಗ್ರಾಮದ ತುಕಾರಾಮ ಮಂದಿರದಲ್ಲಿ ವಿಶ್ವ ಪೌಷ್ಟಿಕಾಂಶ ದಿನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ, ಗರ್ಭಿಣಿಯರ ಸೀಮಂತ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಪೌಷ್ಟಿಕ ಆಹಾರವು ಮನುಷ್ಯನ ಆರೋಗ್ಯ, ಬೆಳವಣಿಗೆ, ಶಕ್ತಿ ಹಾಗೂ ಬುದ್ಧಿಮತ್ತೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ಗರ್ಭಿಣಿಯರು ಸರ್ಕಾರ ನೀಡುವ ಪೌಷ್ಟಿಕ ಆಹಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.  

ವೈದ್ಯಾಧಿಕಾರಿ ಡಾ. ಶಿವಕುಮಾರ ಕುರುಬೆಟ ಗರ್ಭಿಣಿಯರಿಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸೇವನೆಯ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್‌. ರಾವ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಾಯಂದಿರು ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಅಣ್ಣಾಸಾಬ್ ಕೋರೆ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್‌.ಬಿ. ನಾದ್ರೆ, ನ್ಯಾಯವಾದಿಗಳಾದ ಇ.ಎಸ್‌. ವರ್ಧನ, ಆರ್‌.ಎ. ಭಂಡಾರೆ, ಪಿಡಿಒ ಸಂಜಯ ಸೂರ್ಯವಂಶಿ, ಗ್ರಾಮ ಆಡಳಿತಾಧಿಕಾರಿ ಎಸ್‌.ಎಂ. ಕಿಲಾರಿ ಸೇರಿದಂತೆ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.